ಶೌಚಗೃಹದಲ್ಲಿ ಕುಸಿದು ಬಿದ್ದು ಕಂಪ್ಯೂಟರ್ ಆಪರೇಟರ್ ಸಾವು

Published on

ಪಿರಿಯಾಪಟ್ಟಣ: ಪಟ್ಟಣದ ಕೆನರಾ ಬ್ಯಾಂಕ್ ಕಂಪ್ಯೂಟರ್ ನಿರ್ವಹಣೆಗೆಂದು ಬಂದಿದ್ದ ಕಂಪ್ಯೂಟರ್ ಆಪರೇಟರ್ ಶೌಚಗೃಹದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಕೆ.ಆರ್.ನಗರ ತಾಲೂಕಿನ ಹೊಳೆತಂದ್ರೆ ಗ್ರಾಮದ ಟಿ.ಕೆ.ಪ್ರತಾಪ್(28) ಮೃತರು.


ಪಟ್ಟಣದ ಕೆನರಾ ಬ್ಯಾಂಕ್ ಕಂಪ್ಯೂಟರ್ ನಿರ್ವಹಣೆಯನ್ನು ಹೊರಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರತಾಪ್ ಕಂಪ್ಯೂಟರ್ ತಪಾಸಣೆಗೆಂದು ಬ್ಯಾಂಕ್‌ಗೆ ಬಂದಿದ್ದ. ಗುರುವಾರ ಸಂಜೆ 5 ಗಂಟೆಯಲ್ಲಿ ಶೌಚಗೃಹಕ್ಕೆ ತೆರಳಿದ್ದ ಪ್ರತಾಪ್ ತುಂಬಾ ಸಮಯದವರೆಗೂ ಹೊರ ಬರದಿದ್ದಾಗ ಬ್ಯಾಂಕ್ ಸಿಬ್ಬಂದಿ ತೆರಳಿ ನೋಡಿದ್ದಾರೆ. ಆ ವೇಳೆ ಪ್ರತಾಪ್ ಶೌಚಗೃಹದೊಳಗೆ ಕುಸಿದು ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಕುರಿತಂತೆ ಮೃತರ ಸಹೋದರ ರವಿ ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದು, ನನ್ನ ಅಣ್ಣನ ಸಾವಿನ ನಿಖರ ಕಾರಣ ತಿಳಿಯಬೇಕಿದ್ದು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net