

ಮೂಡಿಗೆರೆ: ಸಬ್ಬೇನಹಳ್ಳಿಗೆ ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯಲ್ಲಿ 59 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ವಿದ್ಯುತ್ ತಂತಿ ಮತ್ತು ಬಾವಿಗೆ ಪಂಪ್‌ಸೆಟ್ ಅಳವಡಿಸಬೇಕಿದೆ. 15 ದಿನದಲ್ಲಿ ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನಾಗರಾಜ್ ತಿಳಿಸಿದರು.
ನೀರಿನ ಸಮಸ್ಯೆ ಕುರಿತು ‘ಕುಡಿಯುವ ನೀರಿನಲ್ಲಿ ಬಂದ ಸತ್ತ ಹಾವು, ಕೋಳಿ ತ್ಯಾಜ್ಯ’ ಎಂಬ ಶೀರ್ಷಿಕೆಯಲ್ಲಿ ಬುಧವಾರ ವಿಜಯವಾಣಿ ಪ್ರಕಟಸಿದ ವರದಿಗೆ ಸ್ಪಂದಿಸಿದ ಅಧಿಕಾರಿಗಳ ತಂಡದೊಂದಿಗೆ ಸಬ್ಬೇನಹಳ್ಳಿಗೆ ತೆರಳಿ ಜೆಜೆಎಂ ಕಾಮಗಾರಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗ್ರಾಮದ 451 ಮನೆಗಳಿಗೆ ಕುಡಿಯುವ ನೀರು ಒದಗಿಸಬೇಕಾಗಿದೆ. 400 ಮನೆಗಳಿಗೆ ಹಳೆಯ ಪೈಪ್‌ಲೈನ್ ಮೂಲಕ, 51 ಮನೆಗಳಿಗೆ ಹೊಸ ಪೈಪ್ ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು. ಅದಕ್ಕಾಗಿ 30 ಅಡಿ ಆಳದ ಬಾವಿ, 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ ಎಂದರು.
ಕಾಮಗಾರಿ ಈಗಾಗಲೆ ಪೂರ್ಣಗೊಂಡಿದೆ. ವಿದ್ಯುತ್‌ಕಂಬ, ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಇನ್ನು 200 ಮೀಟರ್ ದೂರಕ್ಕೆ ವಿದ್ಯುತ್‌ತಂತಿ ಅಳವಡಿಸುವುದು ಬಾಕಿ ಉಳಿದಿದೆ. ತಂತಿ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿದ ಕೂಡಲೆ ಬಾವಿಗೆ ಪಂಪ್‌ಸೆಟ್ ಅಳವಡಿಸಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಜೆಜೆಎಂ ಯೋಜನೆಯ ಗುತ್ತಿಗೆದಾರರಿಗೆ ಇನ್ನೂ 35 ಲಕ್ಷ ರೂ. ಪಾವತಿಸಲು ಬಾಕಿ ಉಳಿದಿದೆ. ಅನುದಾನ ಮಂಜೂರಾಗಿದೆ. ಸದ್ಯದಲ್ಲೇ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ. 59 ಲಕ್ಷದಲ್ಲಿ ಉಳಿದ ಹಣ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ವಿದ್ಯುತ್‌ತಂತಿ ಅಳವಡಿಕೆ ಕಾರ್ಯ ತಾಂತ್ರಿಕ ಕಾರಣದಿಂದ ತಡವಾಗಿದೆ. ಇನ್ನು 15 ದಿನದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಫಲ್ಗುಣಿ ಪಿಡಿಒ ಚಂದ್ರಾವತಿ ಮಾತನಾಡಿ, ಸಬ್ಬೇನಹಳ್ಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಳೆಯ ಬಾವಿಯಲ್ಲಿ ಎಣ್ಣೆಮಿಶ್ರಿತ ನೀರಿರುವ ಕಾರಣ ಹೇಮಾವತಿ ನದಿಯಿಂದ ನೀರು ಪೂರೈಕೆ ಮಾಡುತ್ತಿದ್ದೇವೆ. ಗ್ರಾಮಕ್ಕೆ ಪೂರೈಕೆ ಆಗುತ್ತಿರುವ ನೀರನ್ನು ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷೆ ನಡೆಸಿದಾಗ ಉತ್ತಮವಾದ ನೀರು ಎಂದು ವರದಿ ಬಂದಿದೆ. ಜೆಜೆಎಂ ಯೋಜನೆಯ ನೀರು ಪೂರೈಕೆ ಆರಂಭವಾದ ಕೂಡಲೆ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರಕಲಿದೆ ಎಂದು ತಿಳಿಸಿದರು. ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರಾದ ಕಾರ್ತಿಕ್, ದಾಕ್ಷಾಯಣಿ ಇದ್ದರು.