

ಶಿಕಾರಿಪುರ: ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮೋದಿ ಅವರು ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಎಲ್ಲ ಕಾರ್ಯಕರ್ತರೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಸಂಘಟನಾ ಪರ್ವ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ. ರಾಘವೇಂದ್ರ ಅಭಿವೃದ್ಧಿ ಕಾರ್ಯಗಳ ಮೂಲಕ ಅಪಾರ ಜನ ಬೆಂಬಲದೊಂದಿಗೆ 4ನೇ ಬಾರಿಗೆ ಸಂಸದರಾಗಿದ್ದಾರೆ. ಎಲ್ಲರೂ ಸೇರಿ ಶಿವಮೊಗ್ಗವನ್ನು ಮಾದರಿ ಜಿಲ್ಲೆಯಾಗಿ ಮಾಡೋಣ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರ ಬಲದಿಂದ ಇಂದು ಪಕ್ಷ ಸದೃಢವಾಗಿದೆ. ಎಲ್ಲರೂ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು. ತಾಲೂಕಿನ ಜನತೆಯ ಆಶೀರ್ವಾದ, ನಿಮ್ಮ ಪರಿಶ್ರಮದಿಂದ ಶಾಸಕ, ರಾಜ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪ್ರಿಯ ನಾಯಕತ್ವವನ್ನು ಗುರುತಿಸಿ ಶಿಕಾರಿಪುರ ತಾಲೂಕಿನ ಜನತೆ ತ್ರಿವಿಕ್ರಮನಂತೆ ಬೆಳೆಸಿದ್ದಾರೆ. ಯಡಿಯೂರಪ್ಪ ಪಕ್ಷದ ಕಾರ್ಯಕರ್ತರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರ ಕನಸಿನಂತೆ ಶಿಕಾರಿಪುರ ಮಾದರಿ ತಾಲೂಕಾಗಿದೆ. ಅದಕ್ಕೆ ಬೆನ್ನೆಲುಬಾಗಿ ನಿಂತವರು ತಾಲೂಕಿನ ಮಹಾಜನತೆ. ನಿಮ್ಮ ಋಣ ನಮ್ಮ ಕುಟುಂಬದ ಮೇಲಿದೆ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪಕ್ಷ ನಮಗೆ ತಾಯಿ ಇದ್ದಂತೆ. ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡೋಣ. ನರೇಂದ್ರ ಮೋದಿ ಅವರ ಆಡಳಿತದಿಂದ ಜಗತ್ತು ಇಂದು ಭಾರತದ ಕಡೆಗೆ ನೋಡುತ್ತಿದೆ. ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದು ಜನಪರ ಕಾರ್ಯ ಮಾಡುತ್ತಿದೆ. ಇದು ಸಂಘಟನೆಯ ಲ. ಮುಂಗಾರು ಮತ್ತು ಹಿಂಗಾರು ಮಳೆಯ ಅರ್ಭಟದಿಂದ ರೈತರು ಹೈರಾಣಾಗಿದ್ದಾರೆ. ನಮ್ಮ ಕಾರ್ಯಕರ್ತರು ರೈತರ ನೆರವಿಗೆ ಧಾವಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ಹಾಗೂ ಜನಪರ ಯೋಜನೆಗಳ ಅರಿವು ಮೂಡಿಸಿ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷರಾದ ಕೆ.ಎಸ್.ಗುರುಮೂರ್ತಿ, ಎ.ಎಸ್. ಪದ್ಮನಾಭ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ಹನುಮಂತಪ್ಪ, ರೈತ ಮೋರ್ಚಾದ ಸಿದ್ಲಿಂಗಪ್ಪ, ಕೊಳಗಿ ರೇವಣಪ್ಪ, ಟಿ.ಎಸ್. ಮೋಹನ್, ಮಹೇಶ್ ಹುಲ್ಮಾರ್, ಕೆ.ಶೇಖರಪ್ಪ, ವಸಂತಗೌಡ, ಕೆ.ಹಾಲಪ್ಪ, ಯುವಮೋರ್ಚಾದ ಬೆಣ್ಣೆ ಪ್ರವೀಣ, ವೀರನಗೌಡ, ರಾಘವೇಂದ್ರ, ಬಂಗಾರಿ ನಾಯ್ಕ, ರುದ್ರಮುನಿ, ಮಹಿಳಾ ಮೋರ್ಚಾದ ಗಾಯತ್ರಿದೇವಿ, ರೇಖಾ ರಾಜಶೇಖರ್, ನಿವೇದಿತಾ ರಾಜು ಇತರರಿದ್ದರು.