

ಪಾಂಡವಪುರ: ರೈತರು, ಬಡವರು ಮತ್ತು ಶೋಷಿತರ ವಿರುದ್ಧವಾಗಿ ಕೆಲಸ ಮಾಡುವ ಜತೆಗೆ ಸ್ವಾರ್ಥ, ಸ್ವಹಿತಾಸಕ್ತಿ ಮೈಗೂಡಿಸಿಕೊಂಡಿರುವ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಮುಂದಿನ ಚುನವಣೆಯಲ್ಲಿ ಕ್ಷೇತ್ರದ ಜನತೆ ಮನೆಗೆ ಕಳುಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
2004ರಿಂದ ಈವರೆಗೆ ಮೂರು ಬಾರಿ ಶಾಸಕ, ಸಚಿವ ಹಾಗೂ ಒಮ್ಮೆ ಸಂಸದರಾಗಿ ಕ್ಷೇತ್ರಕ್ಕೆ ಶಾಶ್ವತವಾಗಿ ಅನುಕೂಲವಾಗುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕ್ಷೇತ್ರವನ್ನು ಸುತ್ತು ಹಾಕಿದರೆ ಜಂಗಲ್ (ಕಾಡು)ನಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಗ್ರಾಮಗಳ ರಸ್ತೆಗಳ ಸ್ಥಿತಿ ಹೇಳತೀರದು. ಶಾಸಕರ ವರ್ತನೆಯನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರ ವಿರುದ್ಧ ಕೇಸು ದಾಖಲಿಸಿ ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ, ಅವರನ್ನು ಸೋಲಿಸುವ ಮೂಲಕ ಕ್ಷೇತ್ರಕ್ಕೆ ಅಂಟಿರುವ ಶಾಪವನ್ನು ಮತದಾರರು ವಿಮೋಚನೆ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅಭಿವೃದ್ಧಿ ವಿರುದ್ಧದ ನಿಲುವನ್ನು ಹೊಂದಿರುವ ಇವರ ವಿರುದ್ಧ ಮುಂದಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಮಾತನಾಡದೆ ನೇರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು ಮಾತನಾಡಿ, ಶಾಸಕರ ಕುಟುಂಬ ವರ್ಗ ಮೇಲುಕೋಟೆ ಹೋಬಳಿ ಅರಕನಕೆರೆ ಗ್ರಾಮದಲ್ಲಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಅಕ್ಕಪಕ್ಕದ ಗ್ರಾಮಗಳ ಮನೆಗಳು ಬಿರುಕು ಬಿಡುತ್ತಿದೆ. ತಮ್ಮದೇ ಎಸ್ಟಿಜಿ ಸಂಸ್ಥೆಯಿಂದ ತಾಲೂಕಿನಲ್ಲಿ ನಿರ್ವಹಿಸುತ್ತಿರುವ ರಸ್ತೆ ಕಾಮಗಾರಿಗಳು ಕಳಪೆಯಾಗಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ಲೋಕೋಪಯೋಗಿ, ನೀರಾವರಿ, ಜಿಪಂ ಸೇರಿದಂತೆ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ಪ್ಯಾಕೇಜ್ ಆಗಿ ಪರಿವರ್ತಿಸುವ ಮೂಲಕ ಶಾಸಕರು ತಮ್ಮದೇ ಸಂಸ್ಥೆಗೆ ಗುತ್ತಿಗೆ ಪಡೆಯುತ್ತಿದ್ದಾರೆ. ಇದರಿಂದ ಮಧ್ಯಮ ವರ್ಗದ 2,3 ಮತ್ತು 4ನೇ ದರ್ಜೆಯ ಗುತ್ತಿಗೆದಾರರು ಹೊಟ್ಟೆಗೆ ಮಣ್ಣು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಾಗೆಪುರ ಆನಂದಕುಮಾರ್, ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್, ಮುಖಂಡರಾದ ಸಿ.ಎಂ.ಮಹೇಶ್, ಚಿಕ್ಕಾಡೆ ಕೃಷ್ಣೇಗೌಡ, ಯೋಗಣ್ಣ, ರಾಜೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.