ಶಾರದಾವಿಲಾಸ ಕಾಲೇಜು ಚಾಂಪಿಯನ್

11
Published on

ಮಹಾರಾಜ ಕಾಲೇಜಿನಲ್ಲಿ ನಡೆದ ರಾಜ್‌ಕುಮಾರ್ ಸ್ಮಾರಕ ಅಂತರ ಕಾಲೇಜು ಗೀತ ಗಾಯನ ಸ್ಪರ್ಧೆಯಲ್ಲಿ ಶಾರದಾವಿಲಾಸ ಕಾಲೇಜು ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಆಗಿ ಹೊಮ್ಮಿತು.

ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿ ಬುಧವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ 10ಕ್ಕೂ ಹೆಚ್ಚು ಕಾಲೇಜುಗಳು ಪಾಲ್ಗೊಂಡಿದ್ದವು. ಯುವರಾಜ ಕಾಲೇಜಿಗೆ ದ್ವಿತೀಯ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ತಂಡವು 3ನೇ ಸ್ಥಾನ ಪಡೆಯಿತು.

ಸ್ಪರ್ಧೆ ಉದ್ಘಾಟಿಸಿದ ಲೇಖಕ ರವಿಕುಮಾರ್ ಕೊಮ್ಮಾರನಪುರ ಮಾತನಾಡಿ, ರಾಜ್‌ಕುಮಾರ್ ಅವರು ಯಾವುದೇ ಕಪ್ಪುಚುಕ್ಕೆ ಇಲ್ಲದೇ ಬದ್ಧತೆಯಿಂದ ಬದುಕಿದ್ದರು. ಭಾಷಾ ಬಳಕೆಯಲ್ಲಿ ಸ್ಪಷ್ಟತೆ, ಪದ ಬಳಕೆಯ ಜ್ಞಾನ ಚೆನ್ನಾಗಿತ್ತು. ಮಿತಭಾಷಿಯಾದರೂ ಹಾಸ್ಯಪ್ರಜ್ಞೆ ರೂಢಿಸಿಕೊಂಡಿದ್ದರು ಎಂದು ತಿಳಿಸಿದರು.

ರಾಜ್ ಅವರ ಒಂದು ಸಿನಿಮಾ ನೋಡಿದರೆ ಹತ್ತಾರು ಪುಸ್ತಕ ಓದಿದಂತೆ. ಸರಳತೆ, ಎಲ್ಲರನ್ನೂ ಗೌರವಿಸಿ ಸಮಾನವಾಗಿ ಕಾಣುವ ಮನೋಭಾವ, ಎಲ್ಲರೊಳಗೊಂದಾಗುವುದು ಅವರ ಮೇರು ವ್ಯಕ್ತಿತ್ವ ಆಗಿತ್ತು. ಮೌಲ್ಯಗಳ ಮಿಳಿತವಿತ್ತು. ಅದನ್ನು ಪ್ರತಿಯೊಬ್ಬರೂ ಅಳವಡಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಕೆ.ತಿಮ್ಮಯ್ಯ ಮಾತನಾಡಿ, ಅಸಾಮಾನ್ಯವಾದದ್ದನ್ನು ಸಾಧಿಸಬೇಕಾದರೆ ರಾಜ್ ಅವರ ಜೀವನ ವಿಧಾನ ಅರಿಯಬೇಕು. ಸಿನಿಮಾ ಶೂಟಿಂಗ್‌ನಲ್ಲಿ ಹಸಿವಾದಾಗ, ಎಲ್ಲಿಯೂ ಹೋಟೆಲ್ ಇರಲಿಲ್ಲ. ಮನೆ ನಿರ್ಮಾಣದಲ್ಲಿ ತೊಡಗಿದ್ದವರ ಮನೆಯಲ್ಲಿನ ಊಟ ಪಡೆದು ಸೇವಿಸಿದ್ದರು. ಈ ಸರಳ, ಸಜ್ಜನಿಕೆ ಗುಣ ಎಲ್ಲರಿಗೂ ಮಾದರಿ ಎಂದರು.

ಪ್ರಾಂಶುಪಾಲ ಎಚ್.ಸಿ.ದೇವರಾಜೇಗೌಡ, ಸಂಚಾಲಕ ಪ್ರೊ.ರಾಚಯ್ಯ, ಪಿ.ಎಸ್.ಮಧುಸೂದನ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net