ಶನಿವಾರ ಕೊಪ್ಪದಲ್ಲಿ ತರಕಾರಿಗೆ 40 ರೂ.!

5Koppa01 vegetable
ಕೊಪ್ಪ ಪಟ್ಟಣದ ಬಾಳಗಡಿ ರಸ್ತೆಯಲ್ಲಿ ಶನಿವಾರ ತರಕಾರಿ ವ್ಯಾಪಾರ ನಡೆಯುತ್ತಿರುವುದು.
Published on

ಕೊಪ್ಪ: ಹವಾಮಾನ ವೈಪರಿತ್ಯ, ಮಾರುಕಟ್ಟೆ ಏರಿಳಿತ ಹಾಗೂ ನಾನಾ ಕಾರಣಗಳಿಂದ ತರಕಾರಿ ದರದಲ್ಲಿ ಏರುಪೇರುಗಳು ಸಹಜ. ಆದರೆ ಕೊಪ್ಪದಲ್ಲಿ ಶನಿವಾರ ಮಾತ್ರ ಯಾವುದೆ ತರಕಾರಿ ಖರೀದಿಸಿದರೆ ಕೆ.ಜಿ.ಗೆ ಕೇವಲ 40 ರೂ.ಗೆ ಸಿಗುತ್ತದೆ. ಇದು ಅಚ್ಚರಿ ಎನಿಸಿದರು ಸತ್ಯ!

ಕೊಪ್ಪ ಪಟ್ಟಣ ಮಲೆನಾಡ ಮಡಿಲಿನಲ್ಲಿದೆ. ಇಲ್ಲಿನ ವಾತಾವರಣ ಆಹಾರ ಬೆಳೆ ಬೆಳೆಯಲು ಅಷ್ಟು ಸಹಕಾರಿ ಅಲ್ಲ. ಕೊಪ್ಪದಲ್ಲಿ ವಾಣಿಜ್ಯ ಬೆಳೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಹೀಗಾಗಿ ತರಕಾರಿ ಬೆಳೆಗಳು ಬಯಲುಸೀಮೆಯಿಂದ ಕೊಪ್ಪ ಸೇರಿದಂತೆ ಮಲೆನಾಡು ಭಾಗಕ್ಕೆ ಬರಬೇಕಿದೆ.

ಆಹಾರ ಬೆಳೆಗಳನ್ನು ತರಿಸಿಕೊಳ್ಳುವುದರಿಂದ ಇಲ್ಲಿ ತರಕಾರಿ ಬೆಲೆ ಗಗನಕ್ಕೇರಿರುತ್ತದೆ. ತರಕಾರಿ ಮಾರಾಟಗಾರರು ಸಹ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಇದು ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಈ ನಡುವೆ ಏಳು ವರ್ಷಗಳಿಂದ ರೈತರು ನೀಡುವ ಬೆಲೆಗೆ ಕೊಪ್ಪದಲ್ಲಿ ತರಕಾರಿ ಸಿಗುತ್ತಿದೆ. ನೂರಾರು ರೂಪಾಯಿ ಬೆಲೆಯಿದ್ದ ತರಕಾರಿ ಕೇವಲ 30, 40 ರೂ.ಗೆ ಸಿಗುತ್ತಿದೆ. ಚಿಕ್ಕಮಗಳೂರು ಸಮೀಪದ ಹಿರೇಮಗಳೂರಿನ ಮಂಜುನಾಥ್ ಎಂಬುವವರು ಮಲೆನಾಡು ಭಾಗದಲ್ಲಿ ಗ್ರಾಹಕರಿಗೆ ತರಕಾರಿ ಹೊರೆ ಇಳಿಸಲು, ರೈತ ಹಾಗೂ ಗ್ರಾಹಕರ ಸ್ನೇಹಿಯಾಗಿ ಕೊಪ್ಪದ ಬಾಳಗಡಿ ರಸ್ತೆಯ ಬದಿಯಲ್ಲಿ ಪ್ರತಿ ಶನಿವಾರ ತರಕಾರಿ ವ್ಯಾಪಾರ ಮಾಡಿ ಗ್ರಾಹಕರ ಹೊರೆ ಇಳಿಸುತ್ತಾರೆ. ಗುಣಮಟ್ಟದ ತರಕಾರಿಯನ್ನು ರೈತರಿಂದ ನೇರವಾಗಿ ಖರೀದಿಸಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ನೀಡುತ್ತಾರೆ.

10ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಮಾರಾಟ ಮಾಡುವ ಇವರು, ಮಾರುಕಟ್ಟೆಯಲ್ಲಿ ಎಷ್ಟೇ ಬೆಲೆ ಇದ್ದರೂ ಇವರು ನಿಗದಿತ ದರದಲ್ಲಿ ವ್ಯಾಪಾರ ಮಾಡುತ್ತಾರೆ. ಉದಾಹರಣೆಗೆ ಟೊಮೊಟೊ ದರ 120 ರೂ. ಇದ್ದಾಗಲೂ 40 ರೂ, 10 ರೂ. ಇದ್ದಾಗಲೂ 40 ರೂ.ಗೆ ವ್ಯಾಪಾರ ಮಾಡುತ್ತಾರೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂಬುವುದು ಮಂಜುನಾಥ್ ವಾದ. ಬೆಂಡೆಕಾಯಿ, ಆಲೂಗಡ್ಡೆ, ತೊಂಡೆಕಾಯಿ, ಮೂಲಂಗಿ, ಉಡುಪಿ ಗುಳ್ಳ, ನವೀಲ್‌ಕೋಸು, ಸೌತೆಕಾಯಿ, ಬದನೆಕಾಯಿ, ಬಿಟ್ರೋಟ್, ಕ್ಯಾರೆಟ್, ಈರುಳ್ಳಿ, ಸೊರೆಕಾಯಿ, ಹಾಗಲಕಾಯಿ ಸೇರಿದಂತೆ ಸೊಪ್ಪುಗಳು ಸಹ ಕೇವಲ 40 ರೂ.ಗೆ ದೊರೆಯುತ್ತದೆ. ಆದರೆ ಸಂತೆ, ಇತರ ತರಕಾರಿ ಅಂಗಡಿಗಳಲ್ಲಿ ಖರೀದಿಸಿದರೆ ಹೆಚ್ಚು ಬೆಲೆ ನೀಡಬೇಕಾಗುತ್ತದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net