

ರಾಯಚೂರು: ವೇದಗಳು ಸರ್ವ ವಿಷಯಗಳಿಗೂ ಮೂಲಾಧಾರವಾಗಿದ್ದು, ವೇದಗಳಲ್ಲಿ ಇಂತಹ ವಿಷಯಗಳ ಬಗ್ಗೆ ಹೇಳಲ್ಪಟ್ಟಿಲ್ಲ ಎಂದು ನಿರೂಪಿಸಲು ಇಂದಿಗೂ ಯಾರಿದಂಲೂ ಸಾಧ್ಯವಾಗಿಲ್ಲ ಎಂದು ಸೋಸಲೆ ವ್ಯಾಸರಾಜಮಠದ ವಿದ್ಯಾವಿಜಯತೀರ್ಥ ಶ್ರೀಪಾದಂಗಳು ಹೇಳಿದರು.
ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭಾರತ ಪುಣ್ಯಭೂಮಿಯಾಗಿದ್ದು, ಇಲ್ಲಿ ಜನಿಸಲು ಪುಣ್ಯ ಮಾಡಿರಬೇಕು. ಭಗವದ್ಗಿತೆಯಲ್ಲಿ ಹೇಳಿರುವಂತೆ ಎಲ್ಲರ ಹೃದಯದಲ್ಲಿ ಭಗವಂತ ವಾಸ ಮಾಡುತ್ತಿರುವಾಗ ಮೇಲು, ಕೀಳು ಎಂಬುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತರ್ಕದಿಂದ ಒಂದು ವಸ್ತುವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ. ವಿಜ್ಞಾನಕ್ಕೂ ಮೀರಿದ್ದು ವೇದ ವಿಜ್ಞಾನವಾಗಿದೆ ಎಂದು ತಿಳಿಸಿದರು.
ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಅನೇಕ ಅವ್ಯವಸ್ಥೆಗಳಿವೆ. ವಿಪ್ರ ಸಮಾಜ ಆರ್ಥಿಕವಾಗಿ ಸುಧಾರಿಸಿದೆ. ಆದರೆ, ಸೈದ್ದಾಂತಿಕವಾಗಿ ಸುಧಾರಿಸಿಲ್ಲ. ನಾವು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತೇವೆ. ಆದರೆ, ನಮ್ಮ ಕಷ್ಟ ಕೇಳುವವರು ಇಲ್ಲದಂತಾಗಿದೆ. ಮೀಸಲಾತಿ ಸಿಗದ ಬಡವರಿಗೂ ಸೌಲಭ್ಯ ಒದಗಿಸಲು ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ ಎಂದರು.
ಪತ್ರಿಕೆಗಳಿಗೆ ಜಾಹೀರಾತು ನೀಡುವಲ್ಲಿ ಮೀಸಲಾತಿ ಜಾರಿಗೊಳಿಸಲಾಗಿದ್ದು, ಬ್ರಾಹ್ಮಣರು ಪತ್ರಿಕೆಗಳನ್ನು ಮುಚ್ಚುವಂತಹ ಸ್ಥಿತಿ ಎದುರಾಗಿದೆ. ಶೋಷಿತರು, ದುರ್ಬಲರಿಗೆ ಮೀಸಲಾತಿ ಸೌಲಭ್ಯ ನೀಡಲು ವಿರೋಧವಿಲ್ಲ. ಆದರೆ ಉಳಿದ ಸಮುದಾಯದ ದುರ್ಬಲರಿಗೂ ಸೌಲಭ್ಯಗಳು ಸಿಗುವಂತಾಗಬೇಕು ಎಂದು ಅಶೋಕ ಹಾರನಹಳ್ಳಿ ಹೇಳಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ವಿಪ್ರ ಸಮುದಾಯ ಸಮಾಜದಲ್ಲಿ ಮುಖ್ಯ ವಾಹಿನಿಯಾಗಿ ಕೆಲಸ ಮಾಡುತ್ತಿದೆ. ನಾವು ನಮ್ಮತನವನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ. ಹಳೇ ತತ್ತ್ವಜ್ಞಾನದೊಂದಿಗೆ ವಿಜ್ಞಾನವೂ ನಮಗೆ ಬೇಕಾಗಿದೆ ಎಂದರು. ನಿವೃತ್ತ ಶಿಕ್ಷಕ ವೆಂಕಟೇಶರಾವ್, ನಿವೃತ್ತ ಪ್ರಾಧ್ಯಾಪಕಿ ಶೋಭಾಮೂರ್ತಿಗೆ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.