

ತಿ.ನರಸೀಪುರ: ವಿಶ್ವಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಭಾರತೀಯ ಕಲೆ, ಸಂಸ್ಕೃತಿ, ತಂತ್ರಜ್ಞಾನದ ಪ್ರತೀಕವಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣಕುಮಾರ್ ಹೇಳಿದರು.
ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿಶ್ವಕರ್ಮ ಜಯಂತ್ಯುತ್ಸವ ತಾಲೂಕು ಸಮಿತಿಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವಕರ್ಮರು ಅಪಾರ ಜ್ಞಾನದಿಂದ ಅರಮನೆ, ಮಹಲುಗಳು, ವಾಹನಗಳು, ಆಯುಧಗಳನ್ನು ನಿರ್ಮಿಸಿದ್ದಾರೆ. ಪ್ರತಿವರ್ಷ ವಿಶ್ವಕರ್ಮ ಜಯಂತಿಯಂದು ಉಪಕರಣ, ಯಂತ್ರಗಳನ್ನು ಮತ್ತು ಕೈಗಾರಿಕಾ ಘಟಕಗಳನ್ನು ಪೂಜಿಸಲ್ಪಡುವುದು ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ ಯಾವುದೇ ಒಂದು ಸಮುದಾಯ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಉನ್ನತಿ ಹೊಂದಬೇಕಾದರೆ ಶಿಕ್ಷಣ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದವರು ಯಾರನ್ನೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೇ ಉನ್ನತ ಶಿಕ್ಷಣ ಕೊಡಿಸಿ ಆ ಮೂಲಕ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು. ಸಮಾಜದ ಬಾಂಧವರು ಸಂಘಟಿತರಾದಾಗ ಮಾತ್ರವೇ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ವಿಶ್ವ ಕರ್ಮರು ಕುಲಕಸುಬು ಮಾಡುತ್ತ ಪಂಚಕುಲ ಕಸುಬಿನ ಆಧಾರದ ಮೇಲೆ 5 ವಿಭಾಗಗಳಾಗಿ ವಿಂಗಡಣೆಯಾಗಿದ್ದೀರಾ. ನೀವೆಲ್ಲರೂ ಸಂಘಟಿತರಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾದರೆ ತನ್ನಂತಾನೆ ಆರ್ಥಿಕವಾಗಿ ಶಕ್ತಿ ಹೊಂದಬಹುದಾಗಿದೆ ಎಂದರು.
ವಿಶ್ವ ಕರ್ಮ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಬನ್ನೂರು ಪ್ರಭಾಕರ್ ಮಾತನಾಡಿ, ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ನಾವು ಸಂಘಟಿತರಾಗದಿದ್ದರೆ ಯಾವುದೇ ಸ್ಥಾನ ಮಾನ ಪಡೆಯಲು ಸಾದ್ಯವಿಲ್ಲ.
ವಿಶ್ವ ಕರ್ಮ ಸಮಾಜದ ಗೌರವಾಧ್ಯಕ್ಷ ಹಾಗು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎ.ಎನ್.ಸ್ವಾಮಿ, ಕಾರ್ಯಧ್ಯಕ್ಷ ಲೋಕೇಶ್‌ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಶಿವಕುಮಾರಾಚಾರ್, ತಾಲೂಕು ನಾಯಕ ಸಂಘದ ಅಧ್ಯಕ್ಷ ಬನ್ನೂರು ಚಿಕ್ಕಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಮರಿಸ್ವಾಮಿ, ಗ್ರೇಡ್ 2 ತಹಸೀಲ್ದಾರ್ ರಾಜಾಕಾಂತ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಬಾಬು ಜಗಜೀವನ ರಾಮ್ ಸಂಘದ ಮಾಜಿ ಅಧ್ಯಕ್ಷ ಸಿದ್ದರಾಜು, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಮುಖಂಡರಾದ ಸೋಮಣ್ಣ, ಪ್ರಕಾಶಾಚಾರ್, ಬಾಬು ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.