

ಪಿರಿಯಾಪಟ್ಟಣ: ವಿಶ್ವಕರ್ಮ ಸಮಾಜ ಜಾತ್ಯತೀತ ಶಕ್ತಿ ಮತ್ತು ಭಾವೈಕ್ಯತೆಯ ಸಂಕೇತ ಎಂದು ಭಾರತೀಯ ವಿಶ್ವಕರ್ಮ ಸೇವಾ ಪರಿಷತ್‌ನ ಅಧ್ಯಕ್ಷ ಈಶ್ವರ ವಿಶ್ವಕರ್ಮ ಅಭಿಪ್ರಾಯಪಟ್ಟರು.
ತಾಲೂಕು ಶ್ರೀ ವಿಶ್ವಕರ್ಮ ಸೇವಾ ಸಮಾಜ ವತಿಯಿಂದ ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದರು.
ವಿಶ್ವಕರ್ಮ ಸಮಾಜದ ಶಿಲ್ಪಕಲಾ ನೈಪುಣ್ಯತೆ ನೋಡಲು ವಿದೇಶಗಳಿಂದಲೂ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಹಿಂದು ಸಮಾಜ ಈ ಭೂಮಿಯ ಮೇಲೆ ಶಾಶ್ವತವಾಗಿ ಇದೆ ಎಂದಾದರೆ ಅದು ವಿಶ್ವಕರ್ಮ ಸಮಾಜದ
ಕೊಡುಗೆ ಎಂದರೂ ತಪ್ಪಾಗಲಾರದು. ಅಲ್ಲದೆ ಸಮಾಜದ ಪರವಾಗಿ ದನಿ ಎತ್ತುವಹ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಿದೆ ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಮಹದೇವ್, ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಮೀಸಲಾತಿ ಬೇಕು ಎನ್ನುವ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಅರಕಲಗೂಡು ತಾಲ್ಲೂಕಿನ ಅರೆಮಾದನಹಳ್ಳಿಯ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಹಾಗೂ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳನ್ನು ಪಟ್ಟಣದ ಒಳಕೋಟೆ ಬಡಾವಣೆಯಲ್ಲಿರುವ ಕಾಳಿಕಾಂಬ ದೇವಾಲಯ ಮುಂಭಾಗದಿಂದ ಅಲಂಕೃತ ರಥದಲ್ಲಿ ವಿವಿಧ ಕಲಾ ತಂಡಗಳು ಹಾಗೂ ಪೂರ್ಣಕುಂಭ ಮೆರವಣಿಗೆಯೊಂದಿಗೆ ಮೆರವಣಿಗೆ ಮಾಡಲಾಯಿತು. ಮಾಜಿ ಶಾಸಕ ಕೆ.ವೆಂಕಟೇಶ್ ಈ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿಶ್ವಕರ್ಮ ಸಮಾಜದ ಎಂ.ಸಿ.ಮರಿಸ್ವಾಮಿ, ಬಿ.ಜಿ.ಮಹೇಶ್, ನಾಗಲಿಂಗಪ್ಪ.ರಾ.ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಹುಚ್ಚಪ್ಪಾಚಾರ್, ತಾಲೂಕು ವಿಶ್ವಕರ್ಮ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಆಚಾರ್ಯ, ಸಮಾಜದ ಮುಖಂಡರಾದ ಲೋಕೇಶ್, ಲೋಕಪಾಲಯ್ಯ, ಆರ್.ಎನ್.ಜಯತೀರ್ಥ, ಎ.ಎನ್.ಸ್ವಾಮಿ, ರಿಷಿ, ಕೆಂಡಗಣ್ಣ, ರಘುಪತಿ, ವೇಣು, ಎಚ್.ಎನ್.ಸುಬ್ರಹ್ಮಣ್ಯಚಾರ್, ಮಲ್ಲೇಸೋಮಾಚಾರ್, ಪ್ರಕಾಶ್, ಮಲ್ಲೇಶಾಚಾರ್ ಮುಕುಂದಾಚಾರ್, ಕೃಷ್ಣಾಚಾರ್, ಸೋಮಾಚಾರ್, ಪುರಸಭೆ ಸದಸ್ಯರಾದ ಪಿ.ವಿ.ರವಿ, ಮಂಜುನಾಥ್ ಸಿಂಗ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಎ.ನಾಗೇಂದ್ರ, ಜೆಡಿಎಸ್ ತಾಲೂಕುಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಹಾಜರಿದ್ದರು.