ವಿವಿಧ ಹಗರಣಗಳನ್ನು ಸಿಬಿಐಗೆ ವಹಿಸಲು ಅರ್ಜಿ: ನ.29 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

highcourt
Published on

 ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣ, ವಾಲ್ಮೀಕಿ ನಿಗಮ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, 40 ಪರ್ಸಂಟ್ ಕಮಿಷನ್ ಹಗರಣ ಸೇರಿ ಹಾಲಿ ಕಾಂಗ್ರೆಸ್ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ.29ಕ್ಕೆ ಮುಂದೂಡಿದೆ

.

ಈ ಕುರಿತಾಗಿ ಮೈಸೂರಿನ ವಕೀಲ ಸಿ.ಸಂತೋಷ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರೀಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ಪಿಐಎಲ್ ಸಲ್ಲಿಸಲಾಗಿದೆ. ನಿಮ್ಮ ಮನವಿಯನ್ನು ಪುಷ್ಠೀಕರಿಸುವಂತಹ ಯಾವುದೇ ದಾಖಲೆ ಇಲ್ಲ. ಹೀಗಾಗಿ ಸೂಕ್ತ ದಾಖಲೆಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ಎಂದು ಆದೇಶಿಸಿ, ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿದೆ.

ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಮೂಲಕ ಸರ್ಕಾರದ ಹಲವು ಭ್ರಷ್ಟಾಚಾರದ ವಿಚಾರಗಳು ಮುನ್ನೆಲೆಗೆ ಬರುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ಹಾನಿ ಆಗಿದೆ. ಆದರೂ ಕೂಡ ತಪ್ಪಿತಸ್ಥರನ್ನು ಶಿಕ್ಷಿಸುವಂತಹ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ. ಜತೆಗೆ ತಪ್ಪಿತಸ್ಥ ಅಧಿಕಾರಿಗಳಿಗೆ ಉನ್ನತ ಹುದ್ದೆಗಳನ್ನು ನೀಡಲಾಗುತ್ತಿದೆ. ಖುದ್ದಾಗಿ ಸಿಎಂ ಕೂಡ ಸದನದಲ್ಲೆ ಸರ್ಕಾರದ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.

ಪ್ರಕರಣಗಳಲ್ಲಿ ನಿಸ್ಪಕ್ಷಪಾತ ತನಿಖೆ ನಡೆಯಬೇಕಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅಲ್ಲದೆ, ರಾಜ್ಯದಲ್ಲಿ ನಡೆದಿರುವ ಈ ಸಾರ್ವಜನಿಕ ಹಣ ದುರ್ಬಳಕೆಯನ್ನು ತಡೆಯದಿದ್ದರೆ ಅಮಾಯಕ ಜನರಿಗೆ ತೀವ್ರ ನಷ್ಟವಾಗುತ್ತದೆ. ಹಾಗಾಗಿ ರಾಜ್ಯದ ಸಂಪತ್ತು ರಕ್ಷಣೆ ದೃಷ್ಟಿಯಿಂದ ನ್ಯಾಯಾಲಯ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕು ಎಂದು ಮನವಿ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net