

ಬೆಂಗಳೂರು: ವಿಧಾನಸೌಧದ ಸುಣ್ಣಬಣ್ಣ ಮತ್ತು ಮಳೆಯಿಂದಾಗುವ ಸೋರಿಕೆ ತಡೆಯಲು ರಾಜ್ಯ ಸರ್ಕಾರ 3.36 ಕೋಟಿ ರೂ. ಖರ್ಚು ಮಾಡಲು ಸಿದ್ಧತೆ ನಡೆಸಿದೆ. ವಿಧಾನಸೌಧ ನೆಲಮಹಡಿ ಮತ್ತು 3ನೇ ಮಹಡಿ ಕಾರಿಡಾರ್‌ಗಳಿಗೆ ಬಣ್ಣ ಬಳಿಯುವುದು, ಪೋರ್ಟಿಕೊ, ಶೌಚಗೃಹ ಗೋಡೆ ಮತ್ತು ಕೊಠಡಿಗಳ ಸೋರಿಕೆ ತಡೆಯಲು 99.50 ಲಕ್ಷ ರೂ. ಮೀಸಲಿಡಲಾಗಿದೆ.
3ನೇ ಮಹಡಿಯಲ್ಲಿ ಇರುವ ಕೈಗಾರಿಕಾ ಸಚಿವ, ಗೃಹ ಸಚಿವ, ಆಪ್ತ ಕಾರ್ಯದರ್ಶಿಗಳು ಮತ್ತು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಗಳ ಕೊಠಡಿಯಲ್ಲಿ ಇರುವ ಮರದ ಕುರ್ಚಿ, ಟೇಬಲ್, ರ‌್ಯಾಕ್‌ಗಳಿಗೆ ಪಾಲಿಶ್ ಮಾಡುವುದು, ಚಿತ್ರಕಲೆ ಬಿಡಿಸುವುದು, ಮರದ ನೆಲಹಾಸು ಅಳವಡಿಸಲು ಮತ್ತು ಶೌಚಗೃಹ ನವೀಕರಣ ಸೇರಿ ತುರ್ತು ದುರಸ್ತಿ ಕೆಲಸಕ್ಕೆಂದು 64.50 ಲಕ್ಷ ರೂ. ನಿಗದಿ ಮಾಡಲಾಗಿದೆ.
ಪಶ್ಚಿಮ ಮುಖ್ಯದ್ವಾರದಲ್ಲಿ ಎಂ.ಎಸ್. ರ‌್ಯಾಂಪ್ ಮತ್ತು ಎಸ್‌ಎಸ್ ರ‌್ಯಾಂಪ್, ಸಭಾಂಗಣದ ಮೆಟ್ಟಿಲುಗಳಿಗೆ ಇಳಿಜಾರು ಅಳವಡಿಸಲು 13.50 ಲಕ್ಷ ರೂ. ಹಾಗೂ ಸೌಧದ ಟೆರೇಸ್ ಮೇಲೆ ನೀರು ಸೋರಿಕೆ ತಡೆಯಲು ಜಲವಿರೋಧಕ ಪೇಂಟಿಂಗ್ ಇನ್ನಿತರ ಕಾಮಗಾರಿಗೆ 1.59 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.