ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಆನ್‌ಲೈನ್ ಪ್ರಶ್ನೆಪತ್ರಿಕೆಯಿಂದ ವಿದ್ಯಾರ್ಥಿಗಳಿಗೆ ಯಡವಟ್ಟು ಆಗುತ್ತಿದ್ದು, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡದೆ ವಿಶ್ವವಿದ್ಯಾಲಯ ಮಕ್ಕಳೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡತೊಡಗಿದ್ದಾರೆ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಒಳಪಡುವ ೨೮೯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಪರೀಕ್ಷೆಗಳ ೬ನೇ ಸೆಮಿಸ್ಟರ್ ಮತ್ತು ೨ನೇ ಸೆಮಿಸ್ಟೆರ್ ಪರೀಕ್ಷೆಗಳು ಜುಲೈ ೨೨ ರಿಂದ ಪ್ರಾರಂಭಗೊAಡಿದ್ದು, ಕಾಲೇಜುಗಳಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಉತ್ತರ ಪತ್ರಿಕೆಗಳನ್ನು ಕಾಲೇಜುಗಳಿಗೆ ಸರಬರಾಜು ಮಾಡುತ್ತಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವೆಚ್ಚಕ್ಕೆ ಕಡಿವಾಣ ಹಾಕುವ ಕಾರಣದಿಂದ ಪರೀಕ್ಷೆಗೆ ೧ ಗಂಟೆ ಮುಂಚಿತವಾಗಿ ಎಲ್ಲಾ ಕಾಲೇಜುಗಳಿಗೆ ಸರ್ಕಾರ ಒದಗಿಸಿರುವ ಆಪ್ ಮೂಲಕ ಅಥವಾ ಕಾಲೇಜಿಗೆ ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
೩ ಕ್ಕಿಂತ ಹೆಚ್ಚು ಪೇಜುಗಳಿರುವ ಪ್ರಶ್ನೆಪತ್ರಿಕೆಗಳನ್ನು ಮುದ್ರಣ ಮಾಡಿ ನೀಡುತ್ತಿದ್ದಾರೆ. ೧ ಅಥವಾ ೨ ಪೇಜು ಇರುವ ಪ್ರಶ್ನೆಪತ್ರಕೆಗಳನ್ನು ಆನ್‌ಲೈನ್ ಮೂಲಕ ಕಾಲೇಜುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ಆಯಾ ಕಾಲೇಜುಗಳವರು ಪರಿಕ್ಷಾ ಸಮಯಕ್ಕೆ ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟೌಟ್ ತೆಗೆದು ಅಥವಾ ಜೆರಾಕ್ಸ್ ಮೂಲಕ ಪ್ರಿಂಟ್ ಮಾಡಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ.
ಖಾಸಗಿ ಕಾಲೇಜುಗಳನ್ನು ಹೊರತುಪಡಿಸಿ ಸರ್ಕಾರಿ ಕಾಲೇಜುಗಳಲ್ಲಿ ಹೈಟೆಕ್ ಮಾದರಿಯಲ್ಲಿರುವ ಪ್ರಿಂಟರ್ ಮತ್ತು ಜೆರಾಕ್ಸ್ ಮಿಷನ್ ಇಲ್ಲದೇ ಇರುವುದರಿಂದ ಹೆಚ್ಚು ಮಕ್ಕಳು ಇರುವ ಸರ್ಕಾರಿ ಕಾಲೇಜುಗಳಲ್ಲಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟ್ ಮಾಡಿ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಾಗದೆ ತಡವಾಗಿ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ.
ಇದರಿಂದಾಗಿ ಒಂದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ. ಕೋಲಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪರೀಕ್ಷೆಯಲ್ಲಿ ೨ ಗಂಟೆಗೆ ಕೆಲವು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ದೊರೆತಿದ್ದರೆ, ಕೆಲ ವಿದ್ಯಾರ್ಥಿಗಳಿಗೆ ೨.೩೦ ಕ್ಕೆ ಪ್ರಶ್ನೆ ಪತ್ರಿಕೆ ದೊರೆತಿದೆ. ಅಂತಹವರಿಗೆ ಪರೀಕ್ಷಾ ಸಮಯವು ಅರ್ಧ ಗಂಟೆ ಹೆಚ್ಚಾಗಿ ನೀಡುತ್ತಿದ್ದೇವೆ ಎಂದು ಉಪನ್ಯಾಸಕರು ತಿಳಿಸಿದ್ದಾರೆ.
ಮಾಲೂರು ಸರ್ಕಾರಿ ಕಾಲೇಜಿನಲ್ಲಿ ಪರೀಕ್ಷಾ ಪ್ರಾರಂಭದಲ್ಲಿ ೧ ಗಂಟೆ ಕಾಲ ತಡವಾಗಿ ಪರೀಕ್ಷೆ ಪ್ರಾರಂಭವಾಗಿದೆ. ಕಾರಣ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಲು ತಡವಾದ ಕಾರಣದಿಂದ ಪರೀಕ್ಷೆ ಪ್ರಾರಂಭದಿAದಲೂ ೧೫ ನಿಮಿಷದಿಂದ ಹಿಡಿದು ಅರ್ಧ ಗಂಟೆ ತನಕ ಪ್ರಶ್ನೆ ನೀಡುವುದು ತಡವಾಗುತ್ತಿದೆ ಎಂದು ವಿದ್ಯಾರ್ಥಿಗಳ ಆರೋಪವಾಗಿದೆ.
ಬಾಕ್ಸ್
ಸರ್ಕಾರಿ ಕಾಲೇಜುಗಳಲ್ಲಿ ಪ್ರಿಂಟರ್ ಮತ್ತು ಯು.ಪಿ.ಎಸ್ ಹಾಗೂ ಜೆರಾಕ್ಸ್ ಮಿಷನ್ ಸೌಲಭ್ಯ ಇಲ್ಲದೇ ಇರುವುದು, ಶಾಸಕರ ನಿಧಿ ಅಥವಾ ಕಾಲೇಜುಗಳ ಹಣದಲ್ಲಿ ಹೈಟೆಕ್ ಯಂತ್ರಗಳನ್ನು ಖರೀದಿ ಮಾಡಿಕೊಳ್ಳಬೇಕು. ಇನ್ನು ಮುಂದೆ ಎಲ್ಲವೂ ಆನ್‌ಲೈನ್ ವ್ಯವಹಾರವೇ ನಡೆಯುವುದರಿಂದ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರ ಅಭಿಪ್ರಾಯ.