

ತೀರ್ಥಹಳ್ಳಿ: ಭಾರತೀಯ ಅಧ್ಯಾತ್ಮ ಸಂಪತ್ತು ಜೀವನ ವಿಕಾಸಕ್ಕೆ ಅಡಿಪಾಯ. ಧಾರ್ಮಿಕ ಸಂಪ್ರದಾಯ ಮತ್ತು ಆಚರಣೆಗಳು ಮನುಷ್ಯನ ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಹೆದ್ದೂರು ಸಮೀಪದ ಕಬ್ಬಿನತೋಟ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಇಷ್ಟಲಿಂಗ ಪೂಜೆ ನೆರವೇರಿಸಿ ನಂತರ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಹೂವಿನ ಪರಿಮಳ ಗಾಳಿ ಬಂದ ದಿಕ್ಕಿನಲ್ಲಿ ಮಾತ್ರ ಪಸರಿಸಿದರೆ ಮನುಷ್ಯನ ಒಳ್ಳೆಯತನದ ಪರಿಮಳ ಎಲ್ಲೆಡೆಯೂ ಹಬ್ಬುತ್ತದೆ. ಅರ್ಥವಲ್ಲದ ಓದು, ಶಾಂತಿಯಿಲ್ಲದ ಮನೆ, ರುಚಿಯಿಲ್ಲದ ಅಡುಗೆ, ಖುಷಿಯಿಲ್ಲದ ಜೀವನ, ಮಧುರತೆಯಿಲ್ಲದ ಮಾತು, ನೀತಿಯಿಲ್ಲದ ಬದುಕು ಮತ್ತು ನಿಷ್ಠೆಯಿಲ್ಲದ ಧ್ಯಾನ ಜೀವನದಲ್ಲಿ ಯಾವತ್ತೂ ಇರಬಾರದು ಎಂದರು.
ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲರಿಗೂ ಹಿತ ಬಯಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಧರ್ಮದ ದಶವಿಧ ಸೂತ್ರಗಳು ಜೀವನ ಶ್ರೇಯಸ್ಸಿಗೆ ಅವಶ್ಯಕ. ಅವುಗಳ ಪರಿಪಾಲನೆಯಿಂದ ಮಾನವ ಜೀವನ ಉಜ್ವಲಗೊಳ್ಳಲಿ ಎಂದು ಹಾರೈಸಿದರು.
ಶಿವಮೊಗ್ಗ ಪಂಚಾಚಾರ್ಯ ಐಟಿಐ ಸಂಸ್ಥಾಪಕ ಪ್ರಾಚಾರ್ಯ ವಿಘ್ನೇಶ್ವರ ಸೊಲ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಕುರ್ಕಿಮಠ ಸ್ವಾಗತಿಸಿದರು. ಶಾಂತಾ ಆನಂದ್ ನಿರೂಪಿಸಿದರು.