ವಕ್ಕಲೇರಿ ಬಿಳಿ ಬೆಟ್ಟದಲ್ಲಿ ನೇಣು ಬಿಗಿದ ಯುವಕನ ಶವ ಪತ್ತೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ತಾಲ್ಲೂಕು ವಕ್ಕಲೇರಿ ಬಳಿಯ ಬಿಳಿ ಬೆಟ್ಟದಲ್ಲಿ ನೇಣು ಬಿಗಿದುಕೊಂಡು ಸಾವನಪ್ಪಿರುವ ಯುವಕನ ಶವವೊಂದು ಪತ್ತೆಯಾಗಿದ್ದು, ಮೃತ ಸೋಮಶೇಖರ್ (೨೬), ಮಾಲೂರು ತಾಲ್ಲೂಕಿನ ಕೊರಚನೂರು ಗ್ರಾಮದ ಸಾದಪ್ಪನವರ ಮಗ ಎನ್ನಲಾಗಿದೆ.

ಮೃತ ಸೋಮಶೇಖರ್ ರವರ ಶವ ಮರದಲ್ಲೇ ನೇತಾಡುತ್ತಿರುವ ರೀತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಶವ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಸುಮಾರು ಒಂದೂವರೆ ತಿಂಗಳ ಹಿಂದೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಮೃತ ಸೋಮಶೇಖರ್ ಜೂನ್ ೧೭ ರಂದು ಮನೆ ಬಿಟ್ಟು ಹೋಗಿದ್ದು, ೩ ದಿನಗಳ ನಂತರ ಮನೆಗೆ ಮಗ ವಾಪಸ್ಸು ಬಾರದ ಕಾರಣ ಸಾದಪ್ಪ ವೇಮಗಲ್ ಠಾಣೆಯಲ್ಲಿ ದೂರು ನೀಡಿದ್ದಾನೆ. ನರಸಾಪುರ ಸಮೀಪದ ಅಚ್ಚಟ್ನಹಳ್ಳಿ ಸಮೀಪದ ಶುದ್ಧ ಕುಡಿಯುವ ನೀರು ತಯಾರಿಕಾ ಘಟಕಕ್ಕೆ ಚಾಲಕನಾಗಿ ಹೋಗುತ್ತಿದ್ದ ಎನ್ನಲಾಗಿದೆ.

ಮಗ ೩ ದಿನಗಳಾದರೂ ಮನೆಗೆ ಬಾರದೆ ಹೋದಾಗ ಕೆಲಸಕ್ಕೂ ಹೋಗದೆ ಇದ್ದುದ್ದರಿಂದ ಅನುಮಾನಗೊಂಡು ತಂದೆ ಸಾದಪ್ಪ ಠಾಣೆಗೆ ದೂರು ನೀಡಿ ಹುಡುಕಿಕೊಡಬೇಕೆಂದು ಮನವಿ ಮಾಡಿದ್ದರು.

ಮಂಗಳವಾರ ಸಂಜೆ ಕೋಲಾರ ಗ್ರಾಮಾಂತರ ಠಾಣೆಯವರು ದೂರವಾಣಿ ಕರೆ ಮಾಡಿ, ವಕ್ಕಲೇರಿ ಬಿಳಿ ಬೆಟ್ಟದಲ್ಲಿ ಮೃತನ ದೇಹ ಪತ್ತೆಯಾಗಿದೆ ಎಂದು ತಿಳಿಸಿದ ನಂತರ ಮಗ ಮೃತಪಟ್ಟಿರುವುದು ಗೊತ್ತಾಗಿದೆ.

ತಂದೆ ಆರೋಪ :

ನನ್ನ ಮಗ ಚಿಕ್ಕಕೊಡತೂರು ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಮದುವೆ ಮಾಡಿಕೊಳ್ಳಲು ಕೇಳಿದ್ದಾನೆ. ಆಕೆ ಒಪ್ಪಿಲ್ಲದ ಕಾರಣ ಆಕೆಯ ಮನೆಯವರೇ ಮಗನನ್ನು ಕೊಲೆ ಮಾಡಿ ನೇಣು ಬಿಗಿದ ರೀತಿಯಲ್ಲಿ ಮರಕ್ಕೆ ನೇತಾಕಿರಬಹುದು. ನನ್ನ ಮನೆಯಿಂದ ಹೋದ ೩ ದಿನಗಳ ನಂತರ ಆಕೆ ವಾಟ್ಸಾಪ್ ಮೂಲಕ ನಿನ್ನ ಮಗನ ದ್ವಿಚಕ್ರ ವಾಹನ ವಕ್ಕಲೇರಿ ಬಿಳಿ ಬೆಟ್ಟದ ಬಳಿ ಇದೆಯಂತೆ ಹಾಗೆಂದು ನನಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿದ್ದಾಳೆ, ನೋಡಿ ಎಂದು ನನಗೆ ತಿಳಿಸಿದರು. ನಾನು ಹಾಗೂ ನನ್ನ ಸ್ನೇಹಿತರು ಸೇರಿ ಹುಡುಕಾಡಿದಾಗ ದ್ವಿಚಕ್ರ ವಾಹನ ಪತ್ತೆಯಾಯಿತು. ಮಗ ಪತ್ತೆಯಾಗಲಿಲ್ಲ. ಆದ್ದರಿಂದ ಹುಡುಗಿಯ ಕುಟುಂಬದವರೇ ಈ ರೀತಿ ಮಾಡಿರಬಹುದೆಂದು ಕೋಲಾರ ಗ್ರಾಮಾಂತರ ಠಾಣೆಗೆ ತಂದೆ ಸಾದಪ್ಪ ದೂರು ನೀಡಿದ್ದಾರೆ.

ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆಯವರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ಚಿತ್ರ ೦೬ ಕೆ.ಎಲ್.ಆರ್. ೦೫ : ಮೃತ ಯುವಕ ಸೋಮಶೇಖರ್ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net