

ಎಚ್.ಡಿ.ಕೋಟೆ: ವಕೀಲರ ರಕ್ಷಣಾ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ನ್ಯಾಯಾಲಯದ ಆವರಣದಿಂದ ಹೊರಟ ವಕೀಲರು ಹುಣಸೂರು-ಬೇಗೂರು ರಸ್ತೆ ಮೂಲಕ ಸಾಗಿ ತಾಲೂಕು ಆಡಳಿತ ಸೌಧದಲ್ಲಿ ಸಮಾವೇಶಗೊಂಡು ಕೆಲಕಾಲ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಪೊಲೀಸರು, ಸಾರ್ವಜನಿಕರಿಂದ ಕೊಲೆ ಬೆದರಿಕೆ, ದೌರ್ಜನ್ಯ, ದಬ್ಬಾಳಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ. ಹಾಗಾಗಿ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ಅಕ್ರಮಗಳ ವಿರುದ್ಧ ವಕೀಲರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ನಮ್ಮ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲ. ವೈದ್ಯರಿಗೆ ಇರುವಂತೆ ವಕೀಲರಿಗೆ ರಕ್ಷಣಾ ಮಸೂದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಸಣ್ಣರಾಮಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ವಕೀಲರ ಸಂಘದ ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷ ನಾಗೇಶ, ಖಜಾಂಚಿ ಚಲುವಪ್ಪ, ವಕೀಲರಾದ ಕೆ.ಜಿ.ಹಳ್ಳಿ ಸಿದ್ದಪ್ಪಾಜಿ, ಚೌಡಹಳ್ಳಿ ಜವರಯ್ಯ, ಶ್ರೀನಿವಾಸ, ಕೃಷ್ಣಯ್ಯ, ಹನುಮೇಶ್, ಜೆ.ಸಿ.ಕುಮಾರ್, ದೊರೆಸ್ವಾಮಿ, ಕೆ.ಸಿ.ಚಂದ್ರಶೇಖರ್, ಮೋಹನ್, ರಾಮನಾಯಕ, ವೆಂಕಟೇಶ್, ಸರಸ್ವತಿ, ಶಾಂತಾ, ನಯನ, ರೋಜಾ, ವೇದ ಇದ್ದರು.