ಲೋಕಾನುಭವಿ, ಆದ್ಯ ವಚನಕಾರ ದೇವರ ದಾಸಿಮಯ್ಯ

12
Published on

| ಸೂರ್ಯಾಕಾಂತ ಸೊನ್ನದ

ವಚನ ಸಾಹಿತ್ಯದಲ್ಲಿ ಯಾರೂ ಮರೆಯಲು ಸಾಧ್ಯವಿಲ್ಲದ ಹೆಸರು- ದೇವರ ದಾಸಿಮಯ್ಯ. ಏಕೆಂದರೆ ವಚನ ಸಾಹಿತ್ಯ ವಿಶಿಷ್ಟ ರೂಪ ಪಡೆದು ಬೆಳೆದು ಬಂದದ್ದೇ ಆತನಿಂದ. ಆತ ವಚನ ಸಾಹಿತ್ಯದಿಂದ ಮಾತ್ರ ಪ್ರಸಿದ್ಧನಾದವನಲ್ಲ, ಆತನ ಮಹತಿಗೆ ಇನ್ನೂ ಹಲವಾರು ಕಾರಣ, ಪ್ರಸಂಗಗಳಿವೆ. ಇಲ್ಲಿ ಉಲ್ಲೇಖಿಸಲೇಬೇಕಾದ ಎರಡು ಕಾರಣಗಳೆಂದರೆ: 1. ಆತ ಯಾರಿಗೂ ಹೋಲಿಸಲಿಕ್ಕೆ ಆಗದಂಥ ಮಹಾನ್ ಭಕ್ತನೆಂದು ಬಸವಾದಿ ಶರಣರು ಮಾನ್ಯ ಮಾಡಿದ್ದು; 2. ಪವಾಡಸದೃಶವೆಂಬಂತೆ ಭಕ್ತಾದಿಗಳ ಕೊಡುಗೆಯನ್ನೇ ತವನಿಧಿಯನ್ನಾಗಿ ಪಡೆದು ಜ್ಞಾನದ ಜತೆ ಅನ್ನದಾಸೋಹವನ್ನೂ ಆರಂಭಿಸಿದ್ದು.

ಖ್ಯಾತ ಸಂಶೋಧಕ ದಿ. ಡಾ. ಎಂ.ಎಂ. ಕಲಬುರ್ಗಿ ಪ್ರಕಾರ ದಾಸಿಮಯ್ಯ ಮುದನೂರ ಹತ್ತಿರದ ‘ದೇವೂರೂ’ ಎಂಬ ಹಳ್ಳಿಯವ. ದೇವೂರಿನ ದಾಸಿಮಯ್ಯ ಎಂಬುದು ಉಚ್ಛಾರಣೆಯ ಏರುಪೇರಿನಿಂದಾಗಿ ‘ದೇವರ ದಾಸಿಮಯ್ಯ’ ಆಗಿದೆ.

ದೇವರು ಇದ್ದಾನೆಯೇ ಎಂಬ ಪ್ರಶ್ನೆ ಇಂದಿನವರೆಗೂ ಎಲ್ಲರನ್ನು ಚರ್ಚೆಯಲ್ಲಿ ತೊಡಗಿಸಿದೆ. ವಿದ್ವಾಂಸರು ಬೇರೆ ಬೇರೆ ಅಭಿಪ್ರಾಯಗಳನ್ನೇ ವ್ಯಕ್ತಪಡಿಸಿದ್ದಾರೆ. ದೇವರ ದಾಸಿಮಯ್ಯ ಅನೇಕ ವಚನಗಳನ್ನು ರಾಮನಾಥ ಎಂಬ ನಾಮಾಂಕಿತದಲ್ಲಿ ಬರೆದು ಜನರ ಅದೆಷ್ಟೋ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ್ದಾನೆ. ದೇವರ ಅಸ್ತಿತ್ವದ ವಿಷಯದಲ್ಲಿ ದಾಸಿಮಯ್ಯ ಬಯಲು ತತ್ವವನ್ನು ಪ್ರತಿಪಾದಿಸಿದ್ದಾನೆ. ಆತ ಹೇಳುತ್ತಾನೆ, ‘ಆಡಬಾರದ ಬಯಲು ನೋಡಬಾರದ ಬಯಲು ನುಡಿಯಬಾರದ ಬಯಲು ಹಿಡಿಯಬಾರದ ಬಯಲು ಈ ಒಡಲಲ್ಲಿಲ್ಲದ ಬಯಲೊಳಗಡಗಿಪ್ಪ ಭೇದವ ಈ ಲೋಕದ ಜನರೆತ್ತ ಬಲ್ಲರೆ ರಾಮನಾಥ!’ ಆತನ ಅಭಿಪ್ರಾಯದಲ್ಲಿ ಶಿವನು ವಿಶ್ವಮಯನೂ, ಸಾಧಿಸಲು ಅಸಾಧ್ಯನೂ, ಅನಿರ್ವಚನೀಯನೂ, ಅಲಭ್ಯನೂ, ನಿರಾಕಾರನೂ, ನಿರ್ಗಣನೂ ಆಗಿದ್ದಾನೆ. ಸಾಧನೆ ಮಾಡಿ ದೇವರನ್ನು ಕಂಡಿದ್ದೇನೆಂದು ಹೇಳುವ ಡಾಂಭಿಕರ ಬಗ್ಗೆ ದಾಸಿಮಯ್ಯ ತನ್ನ ವಚನದಲ್ಲಿ ಹೀಗೆ ಹೇಳಿದ್ದಾನೆ.

ಖಂಡಿತವಿಲ್ಲದ ಅಖಂಡಿತನೀನೆ
ಕಂಡೇರುವಂತೆ ಹೇಳಯ್ಯ ಕಂಡೆನೆಂಬವರೆಲ್ಲ
ಬಂಜೆಯ ಮಕ್ಕಳು ನೀನಿಂದ ಹೆಜ್ಜೆಯ ಕೆಳಗೆ
ಬಂದು ಬಿಂದು ಹುಟ್ಟಿ ಬೆಳಗುವ ಚಂದವ
ಕಂಡು ಕಣ್ತೆರೆದೆ ಕಾಣಾ ರಾಮನಾಥ!

11ನೇ ಶತಮಾನದಲ್ಲಿ ವೇದ-ಉಪನಿಷತ್ತುಗಳ ಕಾಲದ ಸಂಸ್ಕೃತ ಭಾಷೆ ಮತ್ತು ರಾಜಾಶ್ರಯ ಪಡೆದಿದ್ದ ಜೈನ ಧರ್ಮದ ಗ್ರಂಥಸ್ಥ ಭಾಷೆ ಜನರಿಗೆ ಎಟಕುವಂಥದ್ದಾಗಿರಲಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲು, ಜ್ಞಾನದ ದರ್ಶನ ಮಾಡಿಸಲು ಹೊಸ ಚಳವಳಿಯ ಅವಶ್ಯಕತೆ ಇತ್ತು. ಅಂಥ ಸಂದರ್ಭದಲ್ಲಿ ಸುಲಭ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂಥ ಬೋಧನಾತ್ಮಕ ವಚನಗಳನ್ನು ರಚಿಸುವ ಮೂಲಕ ದೇವರ ದಾಸಿಮಯ್ಯ ವಚನ ಚಳವಳಿಗೆ ನಾಂದಿ ಹಾಡಿದ.

12ನೇ ಶತಮಾನದಲ್ಲಿ ಬಸವಣ್ಣನವರು ಕೂಡ ತಮ್ಮ 18 ವಚನಗಳಲ್ಲಿ ದಾಸಿಮಯ್ಯ ಕುರಿತು ಪ್ರಸ್ತಾಪಿಸಿದ್ದಾರೆ. ಅನೇಕ ಭಕ್ತರು ಅಥವಾ ದಂಪತಿ ಅಥವಾ ಬೇರೆ ಬೇರೆ ಗುಂಪಿನವರು ತಮ್ಮಲ್ಲಿ ಮನಸ್ತಾಪ, ಜಗಳ ಉಂಟಾಗಿದ್ದರೆ ನ್ಯಾಯ ಕೇಳಲು ದಾಸಿಮಯ್ಯ ಬಳಿ ಬರುತ್ತಿದ್ದರು. ದಾಸಿಮಯ್ಯನವರಿಗೆ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಗೌರವವಿತ್ತು. ದಾಸಿಮಯ್ಯ-ದುಗ್ಗಳೆಯರದು ಅತ್ಯಂತ ಸಮರಸ, ಅನುಕರಣೀಯವಾದ ಆದರ್ಶ ದಾಂಪತ್ಯವಾಗಿತ್ತು. ಸಮರಸವಿಲ್ಲದ ದಂಪತಿ ಭಕ್ತಿಯನ್ನು ಶಿವ ಮೆಚ್ಚಲಾರನೆಂದು ನಂಬಿದ್ದ ಆತ ನುಡಿದಂತೆ ನಡೆದು ತೋರಿಸಿದ್ದ. ಅಂತಲೇ

ಅಂತಲೇ ದಾಸಿಮಯ್ಯ ಒಂದು ವಚನದಲ್ಲಿ ತನ್ನ ಪತ್ನಿಯಾದ ದುಗ್ಗಳೆಯ ಗುಣಗಾನ ಮಾಡಿದ್ದಾನೆ. ‘ಬಂದುದನ್ನರಿದು ಬಳಸುವಳು, ಬಂದುದ ಪರಿಣಮಿಸುವಳು, ಬಂಧು ಬಳಗವ ಮರೆಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ!’

ದಾಸಿಮಯ್ಯನ ಕಾಲದಲ್ಲಿ ಆತನ ಊರಾದ ಮುದನೂರು ಅತ್ಯಂತ ಆಕರ್ಷಕವಾದ ಜಲನಿಧಿ ಆಗಿತ್ತೆಂದು ಹೇಳಬಹುದು. ರಾಮನಾಥ ತೀರ್ಥ, ಲಕ್ಷ್ಮಣ ತೀರ್ಥ, ಹಾಲು ತೀರ್ಥ, ಸಂಗಮ ತೀರ್ಥ, ಪಾಂಡು ತೀರ್ಥ, ಮರಳು ತೀರ್ಥ ಮತ್ತು ಸಕ್ಕರೆ ತೀರ್ಥಗಳೆಂಬ ಏಳು ಪುಷ್ಕರಣಿಗಳು ಮುದನೂರನ್ನು ಮರುಭೂಮಿಯಲ್ಲಿನ ಓಯಸಿಸ್ ಇದ್ದಂತೆ ಪರಿವರ್ತಿಸಿವೆ. ಮುದನೂರಿನ ಕ್ಷೇತ್ರ ಪ್ರವೇಶಿಸುತ್ತಲೇ ಯಾವುದೇ ಒಂದು ಸುಂದರ ನಿಸರ್ಗವುಳ್ಳ ಪ್ರದೇಶದೊಳಗೆ ಹೊಕ್ಕಂತಾಗುತ್ತದೆ.

ದೇವರ ದಾಸಿಮಯ್ಯ ಜನ್ಮಸ್ಥಳ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ. ಕಾಮಯ್ಯ ಮತ್ತು ಶಂಕರಿ ಎಂಬ ನೇಕಾರ ದಂಪತಿಯ ಪುತ್ರನಾಗಿ 12ನೇ ಶತಮಾನದ ಮೊದಲರ್ಧ ಭಾಗದಲ್ಲಿ ದಾಸಿಮಯ್ಯ ಜನಿಸಿದ್ದನೆಂಬ ಪ್ರತೀತಿ ಇದೆ.

ಸಿದ್ದಯ್ಯ ಪುರಾಣಿಕರು ಹೇಳಿದಂತೆ ದಾಸಿಮಯ್ಯನವರ ವಚನಗಳಲ್ಲಿ ಲೋಕಾನುಭವವಿದೆ. ಶಿವಾನುಭವವಿದೆ. ವಸ್ತುಸ್ಥಿತಿಯ ವಿವರಣೆ ಇದೆ. ಆದರ್ಶದ ಆಹ್ವಾನವಿದೆ. ಆತೀತವಾದ ಮೊರೆಯಿದೆ. ಅನಂತದ ಕರೆಯಿದೆ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net