

ಸರಗೂರು: ವಿಧಾನಸಭೆ ಚುನಾವಣೆ ಗೆಲುವು ಸಾಧಿಸಿದ್ದೇವೆಂದು ಕಾರ್ಯಕರ್ತರು ಮೈಮರೆಯುವುದು ಬೇಡ. ಬದಲಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಅಂಗವಾಗಿ ಪಟ್ಟಣದ ಲೋಡರ್ಸ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾಂಗ್ರೆಸ್‌ನ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಮೂಲಕ ಬಿಜೆಪಿ ಸೋಲಿಸಲು ಪಣ ತೊಡಬೇಕು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳ ಪೈಕಿ ಸರ್ಕಾರ ನಾಲ್ಕನ್ನು ಈಡೇರಿಸಿದೆ. ಶಕ್ತಿ ಯೋಜನೆ ಯಶಸ್ಸು ಕಂಡಿದ್ದು, ನಿರುದ್ಯೋಗಿ ಯುವಕರಿಗೆ ಹಣ ನೀಡುವ ಯುವನಿಧಿ ಯೋಜನೆ ಡಿಸೆಂಬರ್ ವೇಳೆಗೆ ಜಾರಿಯಾಗಲಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಕಾರ್ಯಕರ್ತರು, ಮುಖಂಡರಿಗೆ ಮೊದಲು ಗೌರವ ನೀಡಬೇಕಿದೆ. ಅವರಿಗೆ ನೋವಾಗದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು ಎಂದರು.
ಲೋಡರ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಶಾಸಕರು ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಚಿಕ್ಕವೀರನಾಯಕ, ಪಪಂ ಸದಸ್ಯ ಶ್ರೀನಿವಾಸ ಮಾತನಾಡಿದರು. ಅಸೋಸಿಯೇಷನ್ ಉಪಾಧ್ಯಕ್ಷ ಚಿಕ್ಕಚೆನ್ನಯ್ಯ, ಪ್ರಧಾನ ಕಾರ್ಯದರ್ಶಿ ವರದರಾಜು, ಸಹ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಗೋವಿಂದರಾಜು, ಸದಸ್ಯರಾದ ನರಸಿಂಹಗೌಡ, ನಿಂಗಯ್ಯ, ಜವರಯ್ಯ, ಹನುಮಂತ, ಚಿಕ್ಕಣಶಟ್ಟಿ, ನಜೀರ್, ವೆಂಕಟೇಶ್, ರಂಗಣ್ಣ, ಸಿದ್ದರಾಜು, ಗಜೇಂದ್ರ, ರಾಮಚಂದ್ರ, ಕಾಂಗ್ರೆಸ್ ಟೌನ್ ಅಧ್ಯಕ್ಷ ನಾಗರಾಜು ಇತರರಿದ್ದರು.