

ಬೆಂಗಳೂರು: 2ನೇ ಸುತ್ತಿನ ಲಾಕ್ಡೌನ್ ಬೆನ್ನಲ್ಲೇ ಪೊಲೀಸರು 2ನೇ ಹಂತದ ಭದ್ರತೆಗೆ ರಸ್ತೆಗೆ ಇಳಿದಿದ್ದಾರೆ. ಅಡ್ಡಾದಿಟ್ಟಿ ಓಡಾಟ, ಪಾಸ್ರಹಿತ ವಾಹನಗಳನ್ನು ಜಪ್ತಿ ಮಾಡಲು ಪೊಲೀಸರು ಗಲ್ಲಿಗಲ್ಲಿಯಲ್ಲಿ ನಾಕಾಬಂದಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಾಟ್ ಸ್ಪಾಟ್ ಏರಿಯಾಗಳ ಸಂಖ್ಯೆಗಳು ದ್ವಿಗುಣವಾಗುತ್ತಿವೆ. ಅದಕ್ಕಾಗಿ 20ರವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ಮಾಡಬೇಕೆಂದು ಗೃಹ ಇಲಾಖೆಗೆ ಸರ್ಕಾರ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದೆ. ಆದ್ದರಿಂದಲೇ ಲಾಕ್ಡೌನ್ ಬಿಗಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಬೇಕಾಬಿಟ್ಟಿ ಓಡಾಡುವುದು, ವಾಯುವಿಹಾರ ನೆಪದಲ್ಲಿ ರಸ್ತೆಗೆ ಬರುವರನ್ನು ನಿಯಂತ್ರಿಸುತ್ತಿದ್ದಾರೆ. ಕದ್ದುಮುಚ್ಚಿ ಗುಂಪು ಸೇರುವರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮರಾ ಮತ್ತು ಡ್ರೋನ್ ಕ್ಯಾಮರಾಗಳ ಕಣ್ಗಾವಲು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿವೆ. ನಿಯಮ ಉಲ್ಲಂಘಿಸುವರನ್ನು ಫೋಟೋ ಮತ್ತು ಸಾಕ್ಷ್ಯ ಸಮೇತ ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಪಾದರಾಯನಪುರ, ಬಾಪೂಜಿನಗರ, ಚಾಮರಾಜ ಪೇಟೆ, ಶಿವಾಜಿನಗರ ಹಾಗೂ ಪೂರ್ವ ವಲಯದಲ್ಲಿ 227 ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಮಾತ್ರ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.
ಚೆಕ್ಪೋಸ್ಟ್ ನಿರ್ವಿುಸಿಕೊಂಡು ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾರೆ. ಈಗಾಗಲೇ 1.87 ಲಕ್ಷ ಕರ್ಫ್ಯೂ ವಿನಾಯಿತಿ ಪಾಸ್ ನೀಡಲಾಗಿದೆ. ಆದರೆ, ಮಾಹಿತಿ ಪ್ರಕಾರ, 3 ಲಕ್ಷ ವಾಹನಗಳು ಸಂಚಾರ ನಡೆಸುತ್ತಿವೆ. ಪಾಸ್ಗಳು ದುರ್ಬಳಕೆ ಮತ್ತು ಅನಗತ್ಯವಾಗಿ ಸಂಚಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕಡಿವಾಣ ಹಾಕಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿರುವ ಬಾಪೂಜಿನಗರ ಮತ್ತು ಪಾದರಾಯನಪುರವನ್ನು ಸೀಲ್ ಡೌನ್ ಮಾಡಿದ್ದರೂ ನಿವಾಸಿಗಳ ಓಡಾಟ ಮಾಮೂಲಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಪೊಲೀಸರು ಗಸ್ತು ತಿರುಗಿ ಭದ್ರತೆ ಹೆಚ್ಚಿಸಿದರು. ಹೊರಬರುವ ವಾಹನ ಸವಾರ/ ಚಾಲಕರಿಗೆ ಎಚ್ಚರಿಕೆ ಕೊಟ್ಟು ವಾಪಸ್ ಕಳುಹಿಸಿದರು. ಸಂಜೆ ವೇಳೆ ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾದರು.
ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿಯುವ ವಾಹನಗಳ ಜಪ್ತಿ ಮಾಡಲು ಪೊಲೀಸರು ಮತ್ತಷ್ಟು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ 30 ಸಾವಿರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ವಾಹನ ಮಾಲೀಕರ ಕೈ ಸೇರುವುದಿಲ್ಲ. ತುರ್ತು ಅಗತ್ಯ ಇದ್ದರೆ ಪೊಲೀಸರ ಅನುಮತಿ ಪಡೆದು ಹೊರಬರುವುದು ಒಳಿತು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
2ನೇ ಹಂತದ ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಪೊಲೀಸರು ಮತ್ತೆ ಲಾಠಿ ಹಿಡಿದಿದ್ದಾರೆ. ಸರ್ಕಾರದ ಸೂಚನೆ ಪಾಲಿಸಿಕೊಂಡು ಮನೆಯಲ್ಲಿಯೇ ಇದ್ದರೆ ಲಾಠಿ ಏಟು ಬೀಳುವುದಿಲ್ಲ. ಇಲ್ಲವಾದರೆ, ಮತ್ತೆ ಪೊಲೀಸರು ಲಾಠಿ ಬೀಸಲಿದ್ದಾರೆ. ಮಂಗಳವಾರ ಟಿಪ್ಪು ನಗರದಲ್ಲಿ ನಿಯಮ ಉಲ್ಲಂಘಿಸಿ ಹೊರಬಂದವರಿಗೆ ಲಾಠಿ ಪ್ರಹಾರ ನಡೆಸಿ ಮನೆಗೆ ಕಳುಹಿಸಿದ್ದಾರೆ.