

ಎನ್.ಆರ್.ಪುರ: ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಹೇಳಿದರು.
ಮೆಣಸೂರು ಗ್ರಾಮದ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಮತ್ತು ಪುಷ್ಪ ಆಸ್ಪತ್ರೆ ಸಹಯೋಗದಲ್ಲಿ ನಡೆದ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಆರೋಗ್ಯ ಕಾಳಜಿ ವಹಿಸಬೇಕು. ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಬಗ್ಗೆ ಎಲ್ಲರೂ ಜಾಗೃತಿ ಹೊಂದಬೇಕು. ಆರೋಗ್ಯದ ರಕ್ಷಣೆಗಾಗಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪೌಷ್ಟಿಕ ಆಹಾರ, ಹಸಿರು ತರಕಾರಿ, ಸೊಪ್ಪುಗಳನ್ನು ಸೇವಿಸಬೇಕು. ಅನಾರೋಗ್ಯವುಂಟಾದಾಗ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ದಿನಕ್ಕೆ 3ರಿಂದ 5 ಲೀಟರ್ ನೀರು ಕುಡಿಯಬೇಕು. ವ್ಯಾಯಾಮ, ಯೋಗ, ಧ್ಯಾನ, ಉತ್ತಮ ನಡವಳಿಕೆಗಳು, ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಹದಿಹರೆಯದ ವಯಸ್ಸಿನಲ್ಲಾಗುವ ದೈಹಿಕ, ಮಾನಸಿಕ ಬದಲಾವಣೆಯನ್ನು ಅರಿತುಕೊಳ್ಳಬೇಕು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕು ಎಂದರು.
ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ಉಷಾ ಮಾತನಾಡಿ, ಆರೋಗ್ಯವೇ ಭಾಗ್ಯ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಗಂಭೀರ ಸಮಸ್ಯೆಯಾಗಿ ಹಲವರನ್ನು ಕಾಡುತ್ತಿದ್ದು ಎಲ್ಲರೂ ಕಾಳಜಿ ವಹಿಸಬೇಕು ಎಂದರು. ಪುಷ್ಪ ಆಸ್ಪತ್ರೆಯ ಸಿಸ್ಟರ್ ಜೆಸ್ಲಿನ್ ಮಾತನಾಡಿ, ಜೀವನದಲ್ಲಿ ಎಲ್ಲ ಸಂಪತ್ತುಗಳಿಗಿಂತಲೂ ಆರೋಗ್ಯವೇ ಮುಖ್ಯ. ಪ್ರತಿಯೊಬ್ಬರೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ಹೇಳಿದರು. ಆಪ್ತ ಸಮಾಲೋಚಕ ಸುಹಾಸ್, ನಮಿತಾ, ಪುಷ್ಪ ಆಸ್ಪತ್ರೆಯ ಸಿಸ್ಟರ್ ನೋಯಲ್, ಪ್ರಾಧ್ಯಾಪಕ ಐ.ಎಂ.ರಾಜೀವ ಇದ್ದರು.