ರೈಲು ನಿಲ್ದಾಣದಲ್ಲಿ ಸ್ವಚ್ಛತೆ, ಸೌಲಭ್ಯ ಸುಧಾರಣೆಗೆ ಕ್ರಮ

7 bir 1 railway
ಬೀರೂರು ರೈಲ್ವೆ ನಿಲ್ದಾಣವನ್ನು ನೈಋತ್ಯ ರೈಲ್ವೆ ವಲಯ ವ್ಯವಸ್ಥಾಪಕ ಮುದಿತ್ ಮಿಥಲ್ ಪರಿಶೀಲಿಸಿದರು. ವಲಯ ವಾಣಿಜ್ಯ ವ್ಯವಸ್ಥಾಪಕ ಲೋಹಿತ್ ಈಶ್ವರ್ ಇದ್ದರು.
Published on

ಬೀರೂರು: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಸೌಲಭ್ಯದ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿ ನೈಋತ್ಯ ರೈಲ್ವೆ ವಲಯ ವ್ಯವಸ್ಥಾಪಕ ಮುದಿತ್ ಮಿಥಲ್ ಭರವಸೆ ನೀಡಿದರು.

ಚಿಕ್ಕಮಗಳೂರಿಗೆ ತೆರಳುವಾಗ ಬೀರೂರು ರೈಲ್ವೆ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿ ಪ್ರಯಾಣಿಕರ ವಿಶ್ರಾಂತಿ ಗೃಹ, ನಿಲ್ದಾಣ ನಿಯಂತ್ರಣಾ ಕೊಠಡಿ, ಆರ್‌ಪಿಎ್ ಕಚೇರಿ ಪರಿಶೀಲಿಸಿದರು. ಇಲ್ಲಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ವಲಯದ 84 ನಿಲ್ದಾಣಗಳಲ್ಲಿ 3 ನಿಲ್ದಾಣಗಳನ್ನು ಖಾಸಗಿ ಗುತ್ತಿಗೆದಾರರಿಗೆ ಸ್ವಚ್ಛತೆ ನಿರ್ವಹಣೆಗಾಗಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು ಬೀರೂರು ಮತ್ತು ಕಡೂರು ಎರಡೂ ನಿಲ್ದಾಣದ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು.

ಪ್ರಯಾಣಿಕರು 3-4 ವರ್ಷಗಳಿಂದ ನಿಲ್ದಾಣದಲ್ಲಿನ ಶೌಚಗೃಹ, ಕುಡಿಯುವ ನೀರಿನ ಸಮಸ್ಯೆ, ್ಲಾಟ್‌ರ್ಮ್‌ಗಳು ಮತ್ತು ಮೇಲ್ಛಾವಣಿ ಸೋರುವಿಕೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುತ್ತಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮವಹಿಸದಿರುವುದನ್ನು ವಲಯ ವ್ಯವಸ್ಥಾಪಕರ ಗಮನಕ್ಕೆ ತರಲಾಯಿತು.

ಹಲವು ರೈಲುಗಳು ವೇಳಾಪಟ್ಟಿಯ ಅನುಸಾರ ಸಂಚರಿಸದೆ ವಿಳಂಬವಾಗುತ್ತಿದ್ದು ಮಾರ್ಗದ ಕೆಲವು ರೈಲುಗಳಲ್ಲಿ ಆಹಾರ ಇತರ ಸೌಕರ್ಯಗಳು ಲಭಿಸದೆ ಮಧುಮೇಹಿಗಳು, ವೃದ್ಧರು ತೊಂದರೆ ಅನುಭವಿಸುತ್ತಿದ್ದು ಸಂಚಾರ ವೇಳೆ ವ್ಯವಸ್ಥಿತಗೊಳಿಸುವಂತೆ ಕೋರಿದರು.

ಪ್ರಯಾಣಿಕರ ಪರವಾಗಿ ಮಾತನಾಡಿದ ಚಂದ್ರಶೇಖರ್, ಬೀರೂರು ಜಿಲ್ಲೆಯ ಪ್ರಮುಖ ನಿಲ್ದಾಣವಾಗಿದ್ದು ನಾಲ್ಕಾರು ಜಿಲ್ಲೆ ಹಾಗೂ ಅಂತರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತಿರುವ ನಿಲ್ದಾಣವಾಗಿದೆ. ಇಲ್ಲಿಂದ ಹೆಚ್ಚಿನ ಪ್ರಯಾಣಿಕರು ಹಾಗೂ ಇಲಾಖೆಗೆ ಆದಾಯ ಬರುತ್ತಿದ್ದರೂ ಸ್ವಚ್ಛತೆ ಕೊರತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ದೂರಿದರು.

ಸಮಸ್ಯೆ ಬಗ್ಗೆ ತಿಳಿಸಲು ಸ್ಟೇಷನ್ ಮಾಸ್ಟರ್ ಕೂಡ ಸ್ಥಳೀಯವಾಗಿ ವಾಸವಿಲ್ಲದ ಕಾರಣ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿದೆ. 4-5 ವರ್ಷಗಳ ಹಿಂದೆ ಉತ್ತಮ ಪರಿಸರ ಹೊಂದಿರುವ ನಿಲ್ದಾಣ ಎಂಬ ಹೆಗ್ಗಳಿಕೆ ಮತ್ತು ಪ್ರಶಸ್ತಿಗೆ ಭಾಜನವಾಗಿದ್ದ ನಿಲ್ದಾಣ ಇಂದು ದುರ್ನಾತದಿಂದ ಕೂಡಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಉನ್ನತ ಅಧಿಕಾರಿಗಳು ಬರುವಾಗ ಮಾತ್ರ ನಿಲ್ದಾಣದ ಸ್ವಚ್ಛತೆ ಬಗ್ಗೆ ಗಮನಹರಿಸುವ ಇಲ್ಲಿನ ಅಧಿಕಾರಿಗಳು ಇನ್ನುಳಿದ ದಿನಗಳಲ್ಲಿ ಸ್ವಚ್ಛತೆಗೆ ಸಿಬ್ಬಂದಿ ಕೊರತೆಯ ನೆಪ ಹೇಳುತ್ತಿದ್ದಾರೆ ಎಂಬುದನ್ನು ನೈಋತ್ಯ ರೈಲ್ವೆ ವಲಯ ವ್ಯವಸ್ಥಾಪಕರ ಗಮನಕ್ಕೆ ತಂದು ಶೀಘ್ರ ಬಗೆಹರಿಸುವಂತೆ ಒತ್ತಾಯಿಸಿದರು.

ಸ್ಟೇಷನ್ ಮಾಸ್ಟರ್ ಪ್ರಭಾತ್‌ಕುಮಾರ್ ಸಿಂಗ್, ಇಲಾಖೆಯ ಅಧಿಕಾರಿಗಳು, ರೈಲ್ವೆ ರಕ್ಷಣಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net