ರೈತರಿಗೆ ಸಾಲ ನೀಡದ ಕ್ರಮ ವಿರೋಧಿಸಿ ಪ್ರತಿಭಟನೆ

14
Published on

ಎಂಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸರಿಯಾಗಿ ಸಾಲ ನೀಡದ ಹಿನ್ನೆಲೆಯಲ್ಲಿ, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ನೇತೃತ್ವದಲ್ಲಿ ನೂರಾರು ರೈತರು ಬುಧವಾರ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಶೋಕ ರಸ್ತೆಯಲ್ಲಿರುವ ಬ್ಯಾಂಕ್ ಮುಂಭಾಗ ಹುಣಸೂರು ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು, ರೈತರು, ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಸಹಕಾರ ಬ್ಯಾಂಕ್‌ಗಳಿಗೆ ರೈತರು ಸಾಲ ಮರು ಪಾವತಿ ಮಾಡಿದ್ದರೂ ಅವರಿಗೆ ಬ್ಯಾಂಕ್‌ನಿಂದ ಮತ್ತೆ ಸಾಲ ನೀಡುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ತಾರತಮ್ಯ ಮಾಡುತ್ತಾರೆ. ಸಾಲ ಕೊಡಲು ರಾಜಕೀಯ ಮಾಡುತ್ತಾರೆ. ಬ್ಯಾಂಕ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಾಲ ಕೊಡಲು ಏಕೆ ತಾರತಮ್ಯ ಮಾಡಬೇಕು ಎಂದು ಪ್ರಶ್ನಿಸಿದರು.

ಹುಣಸೂರಿನ ರೈತರಿಗೆ ಎಂಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಕೊಡುತ್ತಿಲ್ಲ. ಕಳೆದ 5 ತಿಂಗಳಿನಿಂದಲೂ ರೈತರನ್ನು ಅಲೆದಾಡಿಸುತ್ತಿದ್ದಾರೆ. ರೈತರಲ್ಲೂ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಂಬಂತಾಗಿದೆ. ಎಂಡಿಸಿಸಿ ಬ್ಯಾಂಕ್ ದಿವಾಳಿ ಆಗಿದೆ ಅನಿಸುತ್ತದೆ. ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ರೈತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹನಗೋಡು, ಧರ್ಮಾಪುರ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಕಟ್ಟಿದ್ದರೂ ಸಾಲ ನೀಡುತ್ತಿಲ್ಲ. ಸಾಲ ಕೊಡಲು ರೈತರಿಂದ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕನಾಗಿ ರೈತರ ಪರ ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದೇನೆ. ಸಹಕಾರ ಬ್ಯಾಂಕ್ ಕಡೆ ತಲೆ ಹಾಕಬಾರದು ಎಂದು ಈ ರೀತಿಯಾಗಿ ಮಾಡುತ್ತಿದ್ದಾರೆ. ರೈತರ ಪರವಾಗಿ ಕೆಲಸ ಮಾಡಿ. ನಾನು ಬರೋದೇ ಇಲ್ಲ. ನಾನು ಬರಬಾರದು ಎಂದೇ ಚುನಾವಣೆ ನಡೆಸಿಲ್ಲ. ಈಗ ಸಾಲ ನೀಡದೆ ಇನ್ನೊಂದು ರೀತಿಯ ಆಟ ಆಡುತ್ತಿದ್ದಾರೆ ಎಂದು ಹರಿಹಾಯ್ದರು.

ಹುಣಸೂರಿನಲ್ಲಿ 15 ವರ್ಷಗಳಿಂದಲೂ ಅಧಿಕಾರದಲ್ಲಿದ್ದ ನಾಯಕರು ಇದರ ಹಿಂದೆ ಇದ್ದಾರೆ. ಅವರೇ ಖುದ್ದು ರೈತರಿಗೆ ಸಾಲ ನೀಡದಂತೆ ನಿರ್ದೇಶನ ನೀಡಿದ್ದಾರೆ. ಬ್ಯಾಂಕ್ ಆಡಳಿತಾಧಿಕಾರಿ ರೈತರ ಹಿತ ಮರೆತು ಆ ನಾಯಕರ ಮಾತಿಗೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಕುಟುಂಬವನ್ನು ಸಹಕಾರ ಕ್ಷೇತ್ರದಿಂದ ದೂರ ಇಡುವ ಪ್ರಯತ್ನ ನಡೆಯುತ್ತಿದೆ. ರೈತರಿಗೆ ಒಳಿತಾಗುತ್ತದೆ ಅಂದರೆ ನಾನು ಅದನ್ನೂ ತ್ಯಾಗ ಮಾಡಲು ಸಿದ್ಧನಿದ್ದೇನೆ. ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಆಗ್ರಹಿಸಿದರು.

ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ರೈತರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ. ರೈತರಿಗಾಗಿ ಮೂರು ಸಾವಿರ ಕೋಟಿ ರೂ. ಕೊಡಬೇಕು. ಡಿಸಿಸಿ ಬ್ಯಾಂಕ್ ಉಳಿಸಬೇಕು. ಸಹಕಾರ ಸಚಿವರು ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ವಾಸ್ತವ ಸ್ಥಿತಿ ವಿವರಿಸುತ್ತೇನೆ ಎಂದರು.

ಹುಣಸೂರು ತಾಲೂಕಿನ ಧರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅಸ್ವಾಳ್ ಕೆಂಪೇಗೌಡ, ಮುಖಂಡರಾದ ಕೆ.ಟಿ.ಚೆಲುವೇಗೌಡ, ರವಿಕುಮಾರ್, ನರಸಿಂಹಮೂರ್ತಿ, ಎಸ್‌ಬಿಎಂ ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net