ರೈತರಿಗೆ ಡಿಸಿಸಿ ಬ್ಯಾಂಕ್ ಕಾಮಧೇನು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ

22-klr-7
Published on

ಕೋಲಾರ: ಅವಿಭಜಿತ ಜಿಲ್ಲೆಯ ರೈತರು 1500 ಕೋಟಿ ರೂ ಬೆಳೆಸಾಲಕ್ಕೆ ಬೇಡಿಕೆ ಇಟ್ಟಿರುವುದರಿಂದ ಸಾರ್ವಜನಿಕರು ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ರೈತರಿಗೆ ಶಕ್ತಿ ತುಂಬಲು ಸಹಕಾರ ನೀಡುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.

ನಗರದ ಬ್ಯಾಂಕಿನ ಸಭಾಂಗಣದಲ್ಲಿ ಶನಿವಾರ ಡಿಸಿಸಿ ಬ್ಯಾಂಕಿನ ಠೇವಣಿ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡೂ ಜಿಲ್ಲೆಗಳಲ್ಲಿ ಕಳೆದ ವರ್ಷ ಒಳ್ಳೆಯ ಮಳೆಯಾಗಿದೆ, ಕೆರೆಗಳು ತುಂಬಿದ್ದು, ಬೆಳೆ ಇಡುವ ತವಕದಲ್ಲಿ ರೈತರಿದ್ದಾರೆ. ರೈತರಿಗೆ ಡಿಸಿಸಿ ಬ್ಯಾಂಕ್ ಕಾಮಧೇನು ಕಲ್ಪವೃಕ್ಷವಾಗಿದೆ, ರೈತರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವ ಕರ್ತವ್ಯ ಬ್ಯಾಂಕ್ ಮೇಲಿದೆ. ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸುವ ಅರ್ಹ ರೈತರಗೆ ಅಗತ್ಯವಿರುವಷ್ಟು ಸಾಲ ನೀಡಲು ಜನತೆ ನಮ್ಮ ಬ್ಯಾಂಕಿನಲ್ಲೇ ಠೇವಣಿ ಇಟ್ಟಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕಿನಿಂದ ಸಾಲ ಸಿಗದಿದ್ದರೆ ಅನಿವಾರ್ಯವಾಗಿ ರಾಷ್ಟ್ರಿಕೃತ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕಾಗುತ್ತದೆ. ಇದರಿಂದ ರೈತರು ಶೋಷಣೆಗೆ ಒಳಗಾಗುತ್ತಾರೆ, ಮೀಟರ್ ಬಡ್ಡಿ ದಂಧಕೋರರ ಹಾವಳಿ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

3.16 ಕೋಟಿ ರೂ. ಠೇವಣಿ: ನಮ್ಮ ಜಿಲ್ಲೆಯವರಲ್ಲದಿದ್ದರೂ, ಕೋಲಾರ ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ಹಾಗೂ ರೈತರಿಗೆ ನೆರವಾಗುತ್ತಿರುವುದನ್ನು ಕಂಡು ಹೊಸಕೋಟೆಯ ವ್ಯಕ್ತಿಯೊಬ್ಬರು 3.16 ಕೋಟಿ ಠೇವಣಿ ಇಟ್ಟಿದ್ದಾರೆ. ಹೆದ್ದಾರಿ ವಿಸ್ತರಣೆಯಿಂದಾದ ಭೂಸ್ವಾಧೀನಕ್ಕೆ ಸಿಕ್ಕ ಪರಿಹಾರದ ಹಣವನ್ನು ಕೋಲಾರ ಡಿಸಿಸಿ ಬ್ಯಾಂಕಿನಲ್ಲಿಡಲು ನಂಬಿಕೆ ಹಾಗೂ ಧೈರ್ಯದಿಂದ ಹೊಸಕೋಟೆ ವ್ಯಕ್ತಿಯೊಬ್ಬರು ಮುಂದೆ ಬರುವ ಮೂಲಕ ಜಿಲ್ಲೆಯಲ್ಲಿನ ಠೇವಣಿದಾರರಿಗೆ ಆದರ್ಶವಾಗಿದ್ದಾರೆ ಎಂದು ಅಭಿನಂದಿಸಿದರು.

ಇಂತಹ ಇಚ್ಚಾಶಕ್ತಿ ಜಿಲ್ಲೆಯಲ್ಲಿನ ಉಳ್ಳವರಿಗೆ ಬರಬೇಕು, ನಾವು ಉಳಿತಾಯ ಮಾಡುವ ಹಣಕ್ಕೆ ಬಡ್ಡಿ ಬರುವುದು ಮಾತ್ರವಲ್ಲ ಮತ್ತಷ್ಟು ರೈತರ ಬದುಕು ಹಸನಾಗಲು ಕಾರಣವಾಗುತ್ತದೆ ಎಂಬ ಸತ್ಯ ಅರಿತು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಲು ಮುಂದೆ ಬರಬೇಕು ಎಂದರು.

ನಿಮ್ಮ ಹಣಕ್ಕೆ ಸುರಕ್ಷತೆಯ ಖಾತರಿ ನೀಡಲಾಗುತ್ತದೆ ಎಂದು ತಿಳಿಸಿದ ಅವರು, ಸಮಾಜದ ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಡುವ ಮೂಲಕ ರೈತರಿಗೆ ನೆರವಾಗಿ, ದಶಕದ ಹಿಂದೆ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿತ್ತು ಎಂಬ ಒಂದೇ ಆರೋಪ ಬೇಡ, ನಮ್ಮ ಆಡಳಿತ ಮಂಡಳಿ ಬಂದ ನಂತರ ಈಗ ಇತರೆಲ್ಲಾ ವಾಣಿಜ್ಯ ಬ್ಯಾಂಕುಗಳಿಗಿಂತಲೂ ಡಿಸಿಸಿ ಬ್ಯಾಂಕ್ ಸದೃಢವಾಗಿದೆ ಎಂದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್, ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ನಾಗೇಶ್, ದೊಡ್ಡಮನಿ, ಯಲ್ಲಪ್ಪರೆಡ್ಡಿ ಇದ್ದರು.

ಡಿಸಿಸಿ ಬ್ಯಾಂಕಿನಲ್ಲಿ ಇಡುವ ಠೇವಣಿಗೆ ಇತರೆಲ್ಲಾ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ ಮತ್ತು ನಿಮ್ಮ ಹಣದಿಂದ ರೈತರು, ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ನೆರವು ಒದಗಿಸುವ ಕೆಲಸ ಆಗುವುದರಿಂದ ಸಾರ್ಥಕತೆ ಇದೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net