

ಬೆಂಗಳೂರು: ಬಂಡವಾಳ ಹೂಡಿಕೆ, ರೈತರ ಹಿತಕ್ಕಾಗಿ ಸರ್ಕಾರಿ, ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಗಳಿಗೆ ಪುನಶ್ಚೇತನ, ಕಾರ್ಯಾಚರಣೆ ಉದ್ದೇಶದಿಂದ ಸರ್ಕಾರ ಉತ್ತೇಜನ ಕ್ರಮಗಳನ್ನು ಕೈಗೊಂಡಿದೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದ ನಿರಾಣಿ ಶುಗರ್ಸ್ ಲಿಮಿಟೆಡ್ ಕಂಪನಿ ಮೇಲಿನ ಹೊರೆಯನ್ನು ತಕ್ಷಣಕ್ಕೆ ಇಳಿಸಲು ಸಮ್ಮತಿಸಿದೆ. ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಅನುಮೋದನೆ ಪಡೆದು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಗುತ್ತಿಗೆ ಒಪ್ಪಂದ ಮಾಡಿಕೊಂಡ ನಿರಾಣಿ ಶುಗರ್ಸ್ ಕಂಪನಿ ಭರಿಸಬೇಕಾಗಿದ್ದ 24.30 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. ನಂತರ ಈ ಮೊತ್ತವನ್ನು 7-10 ವರ್ಷಗಳಲ್ಲಿ ಸಮಾನ ಕಂತುಗಳಲ್ಲಿ ಮರು ಪಾವತಿಗೆ ಅವಕಾಶ ನೀಡಿದೆ. ಸರ್ಕಾರವೇ ಮುಂಗಡವಾಗಿ ಭರಿಸಲಿರುವ ಈ ಶುಲ್ಕಕ್ಕೆ ಯಾವುದೇ ಬಡ್ಡಿ ವಿಧಿಸದಿರಲು ತೀರ್ಮಾನಿಸಿ, ನಿರಾಣಿ ಶುಗರ್ಸ್ ಕೋರಿಕೆಯನ್ನು ಪುರಸ್ಕರಿಸುವ ಜತೆಗೆ ಉದ್ಯಮ ಸ್ಥಾಪಿಸಲು ಮತ್ತು ಬಂಡವಾಳ ಹೂಡಿಕೆಗೆ ಮುಂದಾಗುವವರಿಗೆ ಸಕಾರಾತ್ಮಕ ಸಂದೇಶ ರವಾನಿಸಿದಂತಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
ಮನ್ನಾಕ್ಕೆ ಮನವಿ: ರೈತರು, ಅವಲಂಬಿತ ಉದ್ಯೋಗಿಗಳು, ಸುತ್ತಮುತ್ತಲ ಅಭಿವೃದ್ಧಿ ಲಕ್ಷ್ಯದಲ್ಲಿಟ್ಟುಕೊಂಡು ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಾಗಿದೆ. ಸರ್ಕಾರದ ನೀತಿಯ ಭಾಗವಾಗಿ 24.30 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮನ್ನಾ ಮಾಡಬೇಕು ಎಂದು ನಿರಾಣಿ ಶುಗರ್ಸ್ ಮನವಿ ಮಾಡಿಕೊಂಡಿತ್ತು.
ಮೈಶುಗರ್ಸ್ಗೆ ಆಸರೆ: ಸರ್ಕಾರದ ಸುಪರ್ದಿಯಲ್ಲೇ ಮೈಶುಗರ್ಸ್ ಪುನಾರಂಭಕ್ಕೆ ಈಗಾಗಲೆ ತೀರ್ವನವಾಗಿದ್ದು, ಪ್ರಾರಂಭಿಕ ವೆಚ್ಚ ಭರಿಸಲು 50 ಕೋಟಿ ರೂ. ನೀಡಲಾಗಿದೆ. ಪುನಶ್ಚೇತನ ಮತ್ತು ಕಾರ್ಯಾಚರಣೆ ಉದ್ದೇಶದಿಂದ 100 ಕೋಟಿ ರೂ. ದುಡಿಮೆ ಬಂಡವಾಳ ಪಡೆಯಲು ಸರ್ಕಾರ ಖಾತರಿ ನೀಡಲಿದೆ. ಸಕ್ಕರೆ ಕಾರ್ಖಾನೆಗಳನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಎಥನಾಲ್ ಉತ್ಪಾದನೆಗೆ ಅನುಮತಿ ನೀಡಲಾಗುತ್ತಿದ್ದು, ಹಂತ ಹಂತವಾಗಿ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲಾಗಿದೆ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು: ಕೈಗಾರಿಕಾ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳನ್ನು ಆ.15 ರೊಳಗೆ ಇ-ಕಚೇರಿ ವ್ಯವಸ್ಥೆಯನ್ನಾಗಿ ಪರಿವರ್ತನೆ ಮಾಡಬೇಕು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶನಿವಾರ ವಿಕಾಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರು ಎಸ್ಎಲ್ಒಗಳು, ಕೆಎಸ್ಎಸ್ಐಡಿಸಿ ಅಧಿಕಾರಿಗಳ ಒಳಗೊಂಡ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದ ಕಚೇರಿಗಳನ್ನು ಗಡುವಿನೊಳಗೆ ಇ ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡದೇ ಇದ್ದರೆ ಮುಖ್ಯ ಕಚೇರಿಗೆ ಬರುವ ಭೌತಿಕ ಕಡತಗಳನ್ನು ಸ್ವೀಕಾರ ಮಾಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಕಂಪ್ಯೂಟರ್ ಇಲ್ಲ, ಸಿಬ್ಬಂದಿ ಇಲ್ಲ, ಕಚೇರಿ ಇಲ್ಲ ಇಂತಹ ಸಬೂಬುಗಳನ್ನು ಹೇಳಬಾರದು. ಇದಕ್ಕೆ ಬೇಕಾದ ಪೂರ್ವ ಸಿದ್ದತೆಗಳನ್ನು ಇಂದಿನಿಂದಲೇ ತಯಾರು ಮಾಡಿಕೊಳ್ಳಿ. ಇಲ್ಲದಿದ್ದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಿಂದ ಬರುವ ಭೌತಿಕ ಕಡತಗಳನ್ನು ಹಿಂದಕ್ಕೆ ಕಳುಹಿಸುವುದಾಗಿ ಸಚಿವ ನಿರಾಣಿ ತಿಳಿಸಿದರು. ರೈತ ಭೂಕಂದಾಯ ದಾಖಲೆಗಳು ಕಾನೂನಾತ್ಮಕವಾಗಿದ್ದರೆ, ಕೆಐಎಡಿಬಿಯಿಂದ ಸ್ವಾಧೀನಮಾಡಿಕೊಂಡ ಜಮೀನುಗಳಿಗೆ ಮೂರು ತಿಂಗಳಲ್ಲಿ ಪರಿಹಾರ ನೀಡಬೇಕು ಎಂದು ಸಚಿವ ನಿರಾಣಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೆಲವು ಕಡೆ ಜಮೀನನ್ನು ಸ್ವಾಧೀನಪಡಿಸಿಕೊಂಡರೂ ರೈತರಿಗೆ ಪರಿಹಾರ ನೀಡದೆ ವಿಳಂಬ ಮಾಡಿಲಾಗಿದೆ ಎಂಬ ಆರೋಪವಿದೆ. ದಾಖಲೆಗಳು ಸರಿ ಇದ್ದರೆ, 90 ದಿನದೊಳಗೆ ಪರಿಹಾರ ನೀಡಲು ಇರುವ ಸಮಸ್ಯೆಯಾದರೂ ಏನು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಇತ್ತೀಚೆಗೆ ಸಣ್ಣ ಕೈಗಾರಿಕೆ ಇಲಾಖೆಗೂ ಭೂಮಿ ನೀಡುವಂತೆ ಮನವಿ ಬಂದಿದೆ. ಕೆಎಐಡಿಬಿಯಲ್ಲಿ ನಮಗೆ ಜಮೀನು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರಾಣಿ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವಾಣಿಜ್ಯ ಮತ್ತು
ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಈ.ವಿ.ರಮಣರೆಡ್ಡಿ, ಇಲಾಖೆಯ ಆಯುಕ್ತೆ, ಗುಂಜನ್ ಕೃಷ್ಣ, ಕೆಐಎಡಿಬಿಯ ಸಿಇಒ ಎನ್. ಶಿವಶಂಕರ, ಎಂಎಸ್ಎಂಇ ನಿರ್ದೇಶಕಿ ಸತ್ಯಭಾಮ, ಕೆಎಸ್ಎಸ್ ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಸೋಮಶೇಖರ್ ಮತ್ತಿರರು ಉಪಸ್ಥಿತರಿದ್ದರು.