

ಹುಣಸೂರು: ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್ ತಿಳಿಸಿದರು.
ತಾಲೂಕಿನ ಸೋನಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹುಣಸೂರು 2ನೇ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಹೈನುಗಾರಿಕೆ, ಸಮಗ್ರ ತೋಟಗಾರಿಕೆ ಕೃಷಿ, ಯಂತ್ರಗಳ ಬಳಕೆ, ಸ್ವಉದ್ಯೋಗ, ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಕೃಷಿಗೆ ಸಂಬಂಧಪಟ್ಟ ಪ್ರಗತಿ ನಿಧಿ ಸಾಲ ಪಡೆದು ಸದುಪಯೋಗ ಪಡೆದುಕೊಂಡವರಿಗೆ ಸಂಸ್ಥೆಯಿಂದ ಅನುದಾನ ನೀಡಲಾಗುತ್ತಿದೆ. ಅಲ್ಲದೆ, ವಿಮಾ ಯೋಜನೆ ಜಾರಿ, ಜ್ಞಾನದೀಪ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸಹಕಾರ ನೀಡಲಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ರೈತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ರೂಪಿಸಲಾಗಿದೆ ಎಂದು ಹೇಳಿದರು.
ಪಶುವೈದ್ಯ ಡಾ.ಪ್ರಕಾಶ್ ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು. ಯೋಜನಾಧಿಕಾರಿ ಬಿ.ಧನಂಜಯ್, ವಲಯ ಮೇಲ್ವಿಚಾರಕ ಬಾಬು, ಕೃಷಿ ಮೇಲ್ವಿಚಾರಕ ಶಿವಶಂಕರ್, ಭಾಗ್ಯಮ್ಮ, ಮಂಜುಳಾ, ಸೇವಾ ಪ್ರತಿನಿಧಿ ವಿನುತಾ, ಸ್ವಸಹಾಯ ಸಂಘ, ಪ್ರಗತಿ ಬಂದು ಸಂಘದ ಸದಸ್ಯರು ಹಾಜರಿದ್ದರು.