ವಿಜಯವಾಣಿ ಸುದ್ದಿಜಾಲ ಕೋಲಾರ
ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೆರೆಗಳ ಒತ್ತುವರಿ ತೆರವು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ ಎಲ್ಲಾ ಕೆರೆಗಳ ಸರ್ವೇ ಕಾರ್ಯವನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಎಲ್ಲಾ ತಹಶೀಲ್ದಾರ್‌ಗಳು ಕ್ರಮ ವಹಿಸಬೇಕು. ಪ್ರತಿ ತಿಂಗಳು ಗುರಿಯನ್ನು ನಿಗದಿಪಡಿಸಿ ಕೆರೆಗಳ ಒತ್ತುವರಿ ತೆರವುಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ತೀಳಿಸಿದರು.
ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕ, ಆ ಕೆರೆಯನ್ನು ಸಂಬAಧಪಟ್ಟ ಇಲಾಖೆಯ ಸುಪರ್ದಿಗೆ ಒಪ್ಪಿಸಿ, ಇಲಾಖೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅಧಿಸೂಚನೆ ಹೊರಡಿಸಬೇಕು. ಮತ್ತೆ ಒತ್ತುವರಿಯಾದರೆ ಆಯಾ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿ ಮೊಕದ್ದಮೆ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ಕೆರೆಯನ್ನು ಒತ್ತುವರಿ ಮಾಡಲು ಅವಕಾಶ ಕಲ್ಪಿಸಬಾರದು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಿಕೊಂಡು ಒತ್ತುವರಿ ತೆರವು ಮತ್ತು ಸಂರಕ್ಷಣೆಗೆ ಕ್ರಿಯಾ ಯೋಜನೆ ರೂಪಿಸಬೇಕು. ಎಚ್ಚರಿಕೆ ಕೊಟ್ಟ ಬಳಿಕವೂ ಒತ್ತುವರಿ ಮುಂದುವರೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು ೨೫೨೦ ಕೆರೆಗಳಿವೆ. ಅವುಗಳಲ್ಲಿ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ೨೩೮೨ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ೧೩೮ ಕೆರೆಗಳು ಇವೆ. ಒತ್ತುವರಿ ಆಗಿರುವುದನ್ನು ಶೀಘ್ರದಲ್ಲೇ ತೆರವು ಮಾಡಬೇಕು. ಕೆರೆಗಳ ಒತ್ತುವರಿ ಸಂಬAಧ ರಾಜ್ಯ ಹೈಕೋರ್ಟ್ನಲ್ಲಿ ಪ್ರಕರಣ ಬಾಕಿ ಇವೆ. ಜಿಲ್ಲಾ ವ್ಯಾಪ್ತಿಯಲ್ಲಿ ಕೆರೆಗಳ ತೆರವು ಮಾಡಿರುವ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಿದೆ. ತೆರವು ಕಾರ್ಯಾಚರಣೆ ತ್ವರಿತವಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ಕೆರೆಗಳ ವಿವರ:
ಜಿಲ್ಲೆಯಲ್ಲಿ ಒಟ್ಟು ೨೫೨೦ ಕೆರೆಗಳಿವೆ ಇವುಗಳ ವ್ಯಾಪ್ತಿ ೫೫೮೧೨ ಏಕರೆ ಪ್ರದೇಶ. ಕೋಲಾರ ತಾಲೂಕಿನಲ್ಲಿ ೪೯೧, ಮಾಲೂರು ೪೭೪, ಮುಳಬಾಗಿಲು ೫೮೬, ಬಂಗಾರಪೇಟೆ ೨೯೧, ಕೆ. ಜಿ. ಎಫ್ ೧೬೧ ಮತ್ತು ಶ್ರೀನಿವಾಸಪುರದಲ್ಲಿ ೫೧೭ ಕೆರೆಗಳಿವೆ. ಇದುವರೆಗೆ ೯೭೭ ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದ್ದು, ೧೮೩೪೯ ಏಕರೆ ವ್ಯಾಪ್ತಿ ಗುರುತಿಸಲಾಗಿದೆ. ಇನ್ನೂ ೧೫೪೩ ಕೆರೆಗಳ ಸರ್ವೇ ಕಾರ್ಯ ನಡೆಸಬೇಕಾಗಿದ್ದು, ಇದುವರೆಗೆ ಸರ್ವೆ ಮಾಡಲಾಗಿರುವ ಕೆರೆಗಳ ಪೈಕಿ ೮೦೭ ಕೆರೆಗಳಲ್ಲಿ ೨೧೫೧ ಏಕರೆ ಒತ್ತುವರಿ ಗುರುತಿಸಲಾಗಿದೆ. ಇವುಗಳ ಪೈಕಿ ೬೯೯ ಕೆರೆಗಳಲ್ಲಿ ೧೭೮೨ ಏಕರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇನ್ನೂ ೧೦೮ ಕೆರೆಗಳ ೩೬೮ ಏಕರೆ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ, ಅಪರ ಜಿಲ್ಲಾಧಿಕಾರಿ ಮಂಗಳ, ಯೋಜನಾ ನಿರ್ದೇಶಕಿ ಅಂಬಿಕಾ, ಎಲ್ಲಾ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ ೦೪ ಕೆ.ಎಲ್.ಆರ್. ೦೧ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೆರೆಗಳ ಒತ್ತುವರಿ ತೆರವು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಸಿ,ಇ.ಓ. ಡಾ. ಪ್ರವೀಣ್, ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ ಮುಂತಾದವರಿದ್ದರು.