ರಾಷ್ಟ್ರಭಕ್ತರ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ ಬಿಜೆಪಿ

20bhr 1 bjp
ಬಾಳೆಹೊನ್ನೂರು ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ಖಾಂಡ್ಯ ಹೋಬಳಿ ಬಿಜೆಪಿಯಿಂದ ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಬೆಂಬಲಿತ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಮಾಲತೇಶ್ ಸಿಗಸೆ, ಪ್ರವೀಣ್ ಖಾಂಡ್ಯ, ವಾಸು ಹುಯಿಗೆರೆ, ಸಂಪತ್, ಜಗದೀಶ್ ಇದ್ದರು.
Published on

ಬಾಳೆಹೊನ್ನೂರು: ಬಿಜೆಪಿ ವಿಶ್ವದಲ್ಲಿ ದೇಶ, ಧರ್ಮಕ್ಕಾಗಿ ಕಾರ್ಯನಿರ್ವಹಿಸುವ ರಾಷ್ಟ್ರಭಕ್ತರ ಏಕೈಕ ಪಕ್ಷ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ ಹೇಳಿದರು.

ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ಖಾಂಡ್ಯ ಹೋಬಳಿಯ ಬಿಜೆಪಿ ಘಟಕ ಆಯೋಜಿಸಿದ್ದ ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಪಕ್ಷದ ಕಾರ್ಯಕರ್ತರನ್ನು ಗೌರವಿಸುವುದು ನಾಯಕರ ಕರ್ತವ್ಯ. ಚುನಾವಣೆ ಸಂದರ್ಭದಲ್ಲಿ ಪಕ್ಷ ಎಲ್ಲೆಲ್ಲಿ ಸೋಲನ್ನು ಕಂಡಿದೆಯೋ ಅದು ವಿರೋಧ ಪಕ್ಷದಿಂದ ಉಂಟಾದ ಸೋಲಲ್ಲ. ಕಾರ್ಯಕರ್ತರ ಕಡೆಗಣನೆ, ಕಾರ್ಯಕರ್ತರ ಹತಾಶೆಯ ಕಾರಣದಿಂದ ಉಂಟಾದ ಸೋಲಾಗಿದೆ ಎಂದು ತಿಳಿಸಿದರು.

ದೇಶ, ರಾಜ್ಯದಲ್ಲಿ ಶಕ್ತ ಕಾರ್ಯಕರ್ತರ ನಿರ್ಮಾಣವೇ ನಮ್ಮ ಗುರಿಯಾಗಿರಬೇಕು. ಅಂತಹ ಉದ್ದೇಶಕ್ಕಾಗಿ ಆಯೋಜಿಸಿರುವ ಖಾಂಡ್ಯ ಹೋಬಳಿಯ ಅಭಿನಂದನಾ ಸಮಾರಂಭ ಇತರರಿಗೂ ಪ್ರೇರಣೆಯಾಗಿದೆ. ಇಂದಿನ ಕ್ಲಿಷ್ಟಕರ ಸಮಯದಲ್ಲಿ ರಾಜ್ಯದ ನಾಯಕತ್ವ ವಹಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರು ರಾಜ್ಯದ ಮೂಲೆಮೂಲೆಗೂ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಭರವಸೆ ಮತ್ತು ಉತ್ಸಾಹ ತುಂಬುತ್ತ ಪುನಃ ಅಧಿಕಾರದೆಡೆಗೆ ಪಕ್ಷವನ್ನು ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಬಜರಂಗದಳದ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಮಾತನಾಡಿ, ಕ್ಷೇತ್ರದ ಬಿಜೆಪಿ ಹಿರಿಯರು ಕೆಲವರ ಚಾಡಿಮಾತನ್ನು ಕೇಳುವುದನ್ನು ಬಿಟ್ಟು ಸ್ವಾಭಿಮಾನಿ ಕಾರ್ಯಕರ್ತರನ್ನು ಬೆಳೆಸಬೇಕು. ಬಿಜೆಪಿಯ ಜನಬೆಂಬಲ ಕೇವಲ ಅಭಿವೃದ್ಧಿ ಹೆಸರಿಗಾಗಿ ಅಲ್ಲ. ಹಿಂದುತ್ವ, ರಾಷ್ಟ್ರೀಯತೆ, ಭಾರತದ ಸಾರ್ವಭೌಮತ್ವಕ್ಕೆ ಬಿಜೆಪಿಯ ದೃಷ್ಟಿಕೋನವನ್ನು ಜನ ಬೆಂಬಲಿಸುತ್ತಾರೆಯೇ ಹೊರತು ಕೇವಲ ಅಭಿವೃದ್ಧಿಗಾಗಿ ಅಲ್ಲ ಎಂಬುದನ್ನು ಹಿರಿಯರು ತಿಳಿದುಕೊಳ್ಳಬೇಕು ಎಂದರು.

ಬಿಜೆಪಿ ಮುಖಂಡ ವಾಸು ಹುಯಿಗೆರೆ ಮಾತನಾಡಿ, ಚಾಡಿ ಮಾತಿನಿಂದಾಗಿ ಶೃಂಗೇರಿ ಕ್ಷೇತ್ರ ಪಕ್ಷದ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಗೌರವಿಸುವುದನ್ನು ಹಿರಿಯರು ಕಲಿಯಬೇಕು ಎಂದು ತಿಳಿಸಿದರು.

ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಬೆಂಬಲಿತ ಕಾರ್ಯಕರ್ತರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ದೇವದಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪತ್, ಮುಖಂಡರಾದ ಸಾರಗೋಡು ಜಗದೀಶ್, ಜಯಶೀಲ್ ಉಜ್ಜಿನಿ, ರವಿ, ಸುಧಾಕರ್, ಮಾಗಲು ಪ್ರವೀಣ್, ವೆಂಕಟೇಶ್, ನಂದೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net