ರಾಯರ ಭವಿಷ್ಯಕ್ಕೆ ಮಾರ್ಕಯ್ಯನಕೋಟೆಯೇ ಸಾಕ್ಷಿ

Kalpataru
Published on

ಒಮ್ಮೆ ತಮಿಳುನಾಡಿನ ಮಾರ್ಕಯ್ಯನಕೋಟೆಯ ಭಗವದ್ಭಕ್ತರು ಪ್ರಾಕೃತಿಕ ತೊಂದರೆಗಳಿಂದ ಪಾರಾಗಲು ಹಾಗೂ ಸಕಲ ವಿಧದ ಸೌಭಾಗ್ಯಗಳಿಂದ ಸಂಪನ್ನರಾಗಲು ಬಯಸಿ ರಾಯರನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದರು. ಆ ಕಾಲಕ್ಕೆ (1987) ಹರಿಕಥಾಕೇಸರೀ ವಿ.ಎಸ್. ವೇಂಕಟರಮಣ ರಾವ್ ಎನ್ನುವವರು ಈ ಯೋಜನೆಗೆ ಚಾಲನೆಯನ್ನಿತ್ತರು. ಅವರು ಅಂದಿನ ಯತಿವರ್ಯರಾಗಿದ್ದ ಶ್ರೀ ಸುಯಮೀಂದ್ರತೀರ್ಥರನ್ನು 12 ವರ್ಷ ಸೇವಿಸಿದ್ದರು. ಶ್ರೀಮಠದ ಸಂಸ್ಥಾನದ ಪಾಚಕರಾಗಿ ರಾಮದೇವರ

ನೈವೇದ್ಯಕ್ಕೆ ಮೃಷ್ಟಾನ್ನ ಸಿದ್ಧಪಡಿಸುತ್ತಿದ್ದುದಲ್ಲದೆ ತಮ್ಮ ಅಭೂತಪೂರ್ವ ಕಂಠಸಿರಿಯಿಂದ ಹರಿಕಥಾಪ್ರಸಂಗಗಳ ಮೂಲಕ ಗುರುರಾಯರ ಭಕ್ತರಿಗೆ ಜ್ಞಾನದ ರಸದೌತಣವನ್ನೂ ಬಡಿಸುತ್ತಿದ್ದರು. ಅವರ ಶ್ರೀಮತಿಯವರ ತವರು ಮಾರ್ಕಯ್ಯನ ಕೋಟೆಯಾಗಿತ್ತು. ವೇಂಕಟರಮಣ ರಾಯರು ಒಮ್ಮೆ ಮಾವನ ಊರಿಗೆ ಬಂದವರೇ ಊರಿನ ಸಮಸ್ತ ಭಕ್ತರ ಮನ ಒಲಿಸಿ ಮಧ್ವಪೀಠದಲ್ಲಿ ಬಂದ ಗುರುರಾಯರನ್ನು ಕರೆತರಲು ಮಾಧ್ವಸಂಘವೊಂದನ್ನು ಆಯೋಜಿಸಿ ತನ್ಮೂಲಕ ಮಂತ್ರಾಲಯದ ಗುರುರಾಯರ ಪ್ರತಿಷ್ಠಾಪನೆ ನಡೆಯಲಿ ಎಂಬ ಸಲಹೆಯನ್ನಿತ್ತರು. ಆಗ ಅದಕ್ಕಾಗಿ ಬೇಕಾಗುವ ಸ್ಥಳವನ್ನು ನಾನೇ ನೀಡುತ್ತೇನೆ ಎಂಬ ಆಶ್ವಾಸನೆಯನ್ನಿತ್ತ ಮಹನೀಯರು ಮೈಸೂರಿನ ವಾಸು ಅಗರಬತ್ತಿ ಕಂಪನಿಯ ಸಂಸ್ಥಾಪಕ ಶ್ರೀರಂಗರಾಯರು. ಅವರೊಂದಿಗೆ ಅದೇ ಊರಿನ ರಾಘವೇಂದ್ರಭಕ್ತರಾಗಿದ್ದ ಕುಪ್ಪಣ್ಣರಾಯರೂ ತಮ್ಮ ಸ್ವಂತ ಸ್ಥಳವನ್ನು (ರಂಗರಾಯರ ಸ್ಥಳದ ಪಕ್ಕದ ಸ್ಥಳವನ್ನು) ದೇಣಿಗೆಯಿತ್ತರು. ಅದೇ ರೀತಿ ಮಧುರೆಯ ರಾಮಕೃಷ್ಣರಾಯರು ಸ್ವಯಂ ರಾಘವೇಂದ್ರಸ್ವಾಮಿಗಳ ಬೃಂದಾವನ ಮತ್ತು ಅದರೊಂದಿಗೆ ಹನುಮಂತದೇವರ ಪ್ರತಿಮಾದಿಗಳನ್ನು ನಿರ್ವಿುಸಿ ತಂದು ಮಠದ ಕಾರ್ಯಕಾರಿ ಸಮಿತಿಗೆ ಒಪ್ಪಿಸಿದರು. ಹೀಗೆ ರಾಯರು ಬರುವ ವಿಷಯ ತಿಳಿದುಕೊಂಡು ಭಕ್ತರು ತಾವಾಗಿಯೇ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಂಡು ಸಿದ್ಧವಾಗಿ ಕಾಯುತ್ತಿದ್ದರು.

ಈ ಸಂದರ್ಭಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿಗಳಾಗಿ ವಿರಾಜಮಾನರಾಗಿದ್ದ ಶ್ರೀ ಸುಜಯೀಂದ್ರತೀರ್ಥರ ಆಜ್ಞೆಯಂತೆ ನಂಜನಗೂಡಿನಲ್ಲಿದ್ದ ರಾಜಾ ಗುರುರಾಜಾಚಾರ್ಯರು ಹಿಂದೆ ತಮಗೆ ಶ್ರೀ ಸುಯಮೀಂದ್ರತೀರ್ಥರಿಂದ ದೊರೆತಿದ್ದ ಮೃತ್ತಿಕೆಯನ್ನು ಅತ್ಯಾದರದಿಂದ ತೆಗೆದುಕೊಂಡು ಬಂದರು. ವೇಂಕಟರಮಣರಾಯರ ಪುತ್ರ ಪರಿಮಳರಾಘವೇಂದ್ರನ್ ಅವರೇ ಮುಂದೆ ನಿಂತು ಕಟ್ಟಡ ನಿರ್ವಣ, ಪ್ರತಿಷ್ಠಾಪನೆ ಮುಂತಾದವುಗಳನ್ನು ನೋಡಿಕೊಂಡರು. ಅದೇ ಸಂದರ್ಭಕ್ಕೆ ಅಂದು ವ್ಯಾಸರಾಜಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಪಯೋನಿಧಿತೀರ್ಥರು ಸಮೀಪದ ಶ್ರೀರಂಗಂಗೆ ಬಂದಿದ್ದವರೇ ಭಕ್ತರ ಆಹ್ವಾನಕ್ಕೆ ಓಗೊಟ್ಟು ಮಾರ್ಕಯ್ಯನಕೋಟೆಗೆ ಆಗಮಿಸಿ ಗುರುರಾಯರ ಮೃತ್ತಿಕೆಯನ್ನು ಪ್ರತಿಷ್ಠಾಪಿಸಿ ಭಕ್ತಸಾಗರವನ್ನು ಅನುಗ್ರಹಿಸಿದರು. ಬೃಂದಾವನವು ಪ್ರತಿಷ್ಠಾಪನೆಯಾದದ್ದು 1987ರ ಆಷಾಢ ಶುದ್ಧ ಸಪ್ತಮಿಯಂದು. ಅಂದು ಶ್ರೀಗುರುರಾಯರ ಮಠದ ಪೀಠಾಧಿಪತಿಗಳೂ ಆದ ಶ್ರೀ ವರದೇಂದ್ರತೀರ್ಥರ ಉತ್ತರಾರಾಧನಾ ದಿವಸ. ‘ರಾಯರು ಮೊದಲೇ ನುಡಿದಿದ್ದ ‘ಸಪ್ತಮೋ ಮತ್ಸಮೋ ಭವೇತ್’ ಎಂಬ ಮೂರನೆಯ ಭವಿಷ್ಯದಂತೆ ವರದೇಂದ್ರತೀರ್ಥರೇ ತಪಸ್ಸಿದ್ಧಿಯಿಂದ ತಮ್ಮೊಳಗೆ ಗುರುರಾಯರ ವಿಶೇಷ ಸನ್ನಿಧಾನವನ್ನು ಹೊಂದಿ ಪಾಠ, ಪ್ರವಚನ, ವ್ಯಾಖ್ಯಾನ, ಜಪ, ಲೋಕಕಲ್ಯಾಣಾದಿಗಳಿಂದ ರಾಯರಂತೆ ಲೋಕವಿಖ್ಯಾತರಾದರು.

ಗುರುರಾಯರು ತಮ್ಮ ದಿವಾನ ವೇಂಕಣ್ಣನಿಗೆ ಹೇಳಿದ್ದ ನಾಲ್ಕನೆಯ ಭವಿಷ್ಯ - ‘ನೀನು ಮೊದಲು ತಯಾರಿಸಿರುವ ಬೃಂದಾವನಕ್ಕೆ ಸಲ್ಲುವವರು ನಮ್ಮ ಪರಮ ಪ್ರೇಮಾಸ್ಪದ ಯತಿವರ್ಯರೂ ಉಭಯ ವಂಶಾಬ್ಧಿಚಂದ್ರಮರೂ ಆಗಿ ಜನಿಸುವ ಶ್ರೀವಾದೀಂದ್ರರೆಂಬ ತಪಸ್ವಿಗಳು’ ಎಂದು. ಅಂತೆಯೇ ವಾದೀಂದ್ರತೀರ್ಥರು ರಾಯರಿಗೆ ಸಲ್ಲಬೇಕಾಗಿದ್ದ ಬೃಂದಾವನವನ್ನು ಪ್ರವೇಶಿಸಿದ್ದಲ್ಲದೆ ಅವರ ಪಕ್ಕದಲ್ಲೇ ನೆಲೆನಿಂತು ಇಂದಿಗೂ ರಾಯರ ಆಪ್ತಕಾರ್ಯದರ್ಶಿಗಳಾಗಿ ವಿರಾಜಿಸುತ್ತಿದ್ದಾರೆ. ಅವರ ವಂಶದಲ್ಲೇ ಬಂದ ಮತ್ತೋರ್ವ ಉಭಯವಂಶಾಬ್ಧಿಚಂದ್ರಮರೇ ಶ್ರೀಮತ್ಸುಶಮೀಂದ್ರತೀರ್ಥ ಶ್ರೀಪಾದರು. ಇವರು 1986ರಿಂದ ಪೀಠಕ್ಕೆ ಬಂದು ‘ನಡೆದಾಡುವ ರಾಯರು’ ಎಂದೇ ವಿಖ್ಯಾತರಾಗಿದ್ದವರು. ಇವರು 1999ರಲ್ಲಿ ಅಂದರೆ ಹನ್ನೆರಡು ವರ್ಷಗಳ ನಂತರ ಸುಮತೀಂದ್ರಪುರಕ್ಕೆ ಆಗಮಿಸಿ ಇಲ್ಲಿನ ಬೃಂದಾವನದಿ ರಾಯರ ಮೃತ್ತಿಕೆಯನ್ನು ಮಂಚಾಲೆಯಿಂದ ತಂದಿರಿಸಿ ಪುನಃ ಬ್ರಹ್ಮಕಲಶಾದಿಗಳನ್ನು ನಡೆಸಿ ರಾಯರ ಸಾನ್ನಿಧ್ಯವನ್ನು ಇನ್ನಷ್ಟು ಹೆಚ್ಚಿಸಿದರು. ಇದರಿಂದ ವಾದೀಂದ್ರತೀರ್ಥರೂ ಸಂತುಷ್ಟರಾದರು. ಇಂತು ರಾಯರ ನಾಲ್ಕೂ ಭವಿಷ್ಯವಾಣಿಗಳಿಗೂ ಮಾರ್ಕಯ್ಯನಕೋಟೆಗೂ ಆಪ್ಯಾಯಮಾನ ಸಂಬಂಧ. 33 ವರ್ಷ ಸಂದ ಕಾರಣ ಇದೇ ವರ್ಷ ಸದ್ಯದಲ್ಲೇ ಈ ಮಠವು ಕುಂಭಾಭಿಷೇಕ ಕಾಣಲಿದ್ದು ಭಕ್ತರ ನೆರವನ್ನು ಅಪೇಕ್ಷಿಸುತ್ತಿದೆ. ಇಲ್ಲಿನ ರಾಯರ ಮಹಿಮೆಗೆ ಸಾಕ್ಷಿಯಾಗಿ ಮಠದ ಅರ್ಚಕರಾದ ಶ್ರೀ ಶ್ರೀಧರಾಚಾರ್ಯರೇ ಇದ್ದಾರೆ. ಶ್ರೀಯುತರು ದೃಷ್ಟಿವಿಕಲರಾಗಿದ್ದರೂ 1999ರಿಂದಲೂ ಎಡಬಿಡದೆ ಏಕಾಕಿಯಾಗಿ ಅಂತರ್ದೃಷ್ಟಿಯಿಂದ ರಾಯರ ಸಕಲ ವಿಧದ ಸೇವೆಯನ್ನೂ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತ ರಾಯರ ಕಾರುಣ್ಯದ ಪ್ರತಿರೂಪರಾಗಿದ್ದಾರೆ.

(ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

(ಪ್ರತಿಕ್ರಿಯಿಸಿ: vidwansuman@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net