

ಸೊರಬ: ನಾಡಿಗೆ ಅನ್ನ ನೀಡುವ ರೈತರ ಬಗ್ಗೆ ಆಳುವ ಸರ್ಕಾರಗಳು ಗಮನ ನೀಡುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ರೈತ ವರ್ಗ ಸಂಕಷ್ಟದಲ್ಲಿ ಸಿಲುಕಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್ ಪಾಟೀಲ್ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಗೋ ಸಂರಕ್ಷಣಾ ಹೋರಾಟ ಸಮಿತಿ, ರೈತ ಸಂಘ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಮಹನೀಯರ ದಿನಾಚರಣೆಗಳನ್ನು ಸರ್ಕಾರ ಅದ್ಧೂರಿಯಾಗಿ ಆಚರಿಸುತ್ತಿದೆ. ಅಂತೆಯೇ ದೇಶದ ಬೆನ್ನೆಲುಬಾದ ರೈತರ ದಿನವನ್ನು ಸಹ ಸರ್ಕಾರದಿಂದ ಆಚರಿಸಬೇಕು. ಅಂದು ಉತ್ತಮ ರೈತರನ್ನು ಗುರುತಿಸುವ ಕೆಲಸವಾಗುವ ಜತೆಗೆ ರೈತರಿಗಾಗಿ ವಿಶೇಷ ಯೋಜನೆಗಳು ಘೋಷಣೆಯಾಗಬೇಕು. ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಹಿತ ಕಾಯವಲ್ಲಿ ವಿಲವಾಗಿವೆ ಎಂದರು.
ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಚಿದಾನಂದ ಗೌಡ, ರೈತ ಸಂಘದ ಅಧ್ಯಕ್ಷ ಈಶ್ವರಪ್ಪ, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್, ಪ್ರಭಾಕರ ರಾಯ್ಕರ್, ಶಾಂತಮ್ಮ ಉಳವಿ, ಶಿವಪ್ಪ, ಆಶೀಸ್ ನಾಗಪ್ಪ ಇತರರಿದ್ದರು.