

ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಶುರು ಮಾಡಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದರು. ಅಂದು ಗಲಾಟೆ ನಡೆದ ದಿನ ಸಿ.ಟಿ. ರವಿ ಜತೆ ಮಾಧ್ಯಮಗಳು ಇರದಿದ್ದರೆ ಸಿ.ಟಿ.ರವಿ ಕಥೆ ಏನಾಗುತ್ತಿತ್ತು? ಅದನ್ನು ಸ್ವಲ್ಪ ಊಹೆ ಮಾಡಿಕೊಳ್ಳಿ. ಸಿದ್ದರಾಮಯ್ಯ ಅವರ ಕಾಲದಲ್ಲಿ ದ್ವೇಷದ ರಾಜಕಾರಣ ಶುರುವಾಗಿರುವುದು ನನಗೆ ಬೇಸರ ಮೂಡಿಸುತ್ತಿದೆ ಎಂದರು.
ಈ ಪ್ರಕರಣ ಬೆಳಸುವುದು ಬೇಡ. ಇದು ಸದನದ ವಿಚಾರ ಇಲ್ಲಿಗೆ ಬಿಟ್ಟು ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಹೇಳಿಲ್ಲವೇ? ಅವರಿಬ್ಬರೂ ಆತ್ಮಸಾಕ್ಷಿ ಸಮೇತ ಹೇಳಲಿ. ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ರೀತಿಯ ರಾಜಕಾರಣ ಶುರುವಾಗಿರುವುದು ನನಗೆ ಬೇಸರ ಮೂಡಿಸುತ್ತಿದೆ ಎಂದರು.
ಸದನದ ವಿಚಾರ ಸ್ಪೀಕರ್ ತೀರ್ಮಾನವೇ ಅಂತಿಮ. ಪ್ರಕರಣದಲ್ಲಿ ಯಾರದ್ದು ತಪ್ಪು ಇದೆ ಎಂಬುದನ್ನು ಸ್ಪೀಕರ್ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ನಮ್ಮದೇ ತಪ್ಪಾಗಿದ್ದರೂ ನಾವು ಅದನ್ನು ಸ್ವೀಕರಿಸುತ್ತೇವೆ. ಆದರೆ ಸರ್ಕಾರ ಪೊಲೀಸರ ಮೂಲಕ ಸಿ.ಟಿ.ರವಿ ಅವರನ್ನು ಬಂಧಿಸಿ, ಈ ರೀತಿ ಹಿಂಸೆ ಕೊಡಿಸಿದ್ದು ಎಷ್ಟು ಸರಿ? ಏಳೆಂಟು ಗಂಟೆ ರವಿ ಅವರನ್ನು ಆ ರೀತಿ ಸುತ್ತಿಸುವ ಅವಶ್ಯಕತೆ ಇತ್ತಾ? ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಖಜಾನೆಯಲ್ಲಾ ಖಾಲಿಯಾಗಿದೆ. ಬಹಳಷ್ಟು ಹುಳುಕುಗಳು ಶುರುವಾಗಿದೆ. ಈ ಹುಳುಕುಗಳನ್ನು ಮುಚ್ಚಿಕೊಳ್ಳಲು ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರದಲ್ಲಿ ಯಾರಿಗೆ ಬೇಕಾದರೂ ದೂರು ಕೊಡಲಿ. ನಮಗೆ ಏನು ತೊಂದರೆ ಇಲ್ಲ. ಇದು ಸದನದ ವಿಚಾರವಾಗಿದ್ದು, ಅದನ್ನು ಎಲ್ಲಿ, ಹೇಗೆ ಮಾತನಾಡಬೇಕು ಎಂಬುದಕ್ಕೆ ಕಾನೂನು, ನಿಯಮ ಇದೆ. ಅದರ ವ್ಯಾಪ್ತಿಯಲ್ಲಿ ಎಲ್ಲರೂ ಇರಬೇಕು ಎಂದರು.
ಗೃಹ ಸಚಿವ ಅಮಿತ್ ಷಾ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮೋದಿ ಸರ್ಕಾರ ವಿರುದ್ಧ ಅವರಿಗೆ ಏನು ವಿಚಾರ ಇಲ್ಲ. ಜನರನ್ನು ಎತ್ತಿ ಕಟ್ಟಲು ಈ ಕೆಲಸ ನಡೆಯುತ್ತಿದೆ ಎಂದು ದೂರಿದರು.
ಉತ್ತರ ಭಾರತದಲ್ಲಿ ಈ ಹೋರಾಟದ ಸದ್ದೇ ಇಲ್ಲ. ದಕ್ಷಿಣ ಭಾರತದಲ್ಲಿ ಅಷ್ಟೇ ಈ ಸದ್ದು ನಡೆಯುತ್ತಿದೆ. ಕರ್ನಾಟಕದಲ್ಲಿ ಜನರನ್ನು ಕಾಂಗ್ರೆಸ್ ದಡ್ಡರು ಎಂದುಕೊಂಡು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ. ಕರ್ನಾಟಕದ ಜನ ಒಂದು ಬಾರಿ ಕಾಂಗ್ರೆಸ್‌ನ ಸುಳ್ಳು ನಂಬಿ ದಡ್ಡರಾಗಿದ್ದಾರೆ. ಇನ್ನೊಮ್ಮೆ ಆ ದಡ್ಡತನ ಮಾಡುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಒಳಗಡೆ ಚೈಲ್ಡ್ ರೀತಿ ವರ್ತನೆ ಮಾಡುತ್ತಿದ್ದಾರೆ. ಅವರ ಈ ಯಾವ ಆಟಗಳು ನಡೆಯುವುದಿಲ್ಲ ಎಂದರು.