ವಿಜಯವಾಣಿ ಸುದ್ದಿಜಾಲ ಕೋಲಾರ
ಪರಿಶಿಷ್ಟ ಜಾತಿ, ಪಂಗಡದ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದ್ದು, ಕೂಡಲೇ ಅನುದಾನವನ್ನು ವಾಪಸ್ಸು ನೀಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಂಸದ ಎಸ್.ಮುನಿಸ್ವಾಮಿ, ೫೦ ಸಾವಿರ ಕೋಟಿ ಎಸ್ಸಿಪಿ, ಟಿಎಸ್ಪಿ ಹಣವನ್ನು ರಾಜ್ಯ ಸರ್ಕಾರವು ನಕಲಿ ಗ್ಯಾರೆಂಟಿ ಯೋಜನೆಗಳಿಗೆ ಬಳಸಿದ್ದು, ಕೂಡಲೇ ವಾಪಸ್ ನೀಡಬೇಕು. ದಲಿತರ ಹಣ ನುಂಗಿ ನೀರು ಕುಡಿಯುತ್ತಿದ್ದರೂ ಜಿಲ್ಲೆಯ ದಲಿತ ನಾಯಕರು ಧ್ವನಿ ಎತ್ತದಿರುವುದು ಬೇಸರದ ಸಂಗತಿಯಾಗಿದ್ದು, ನಮ್ಮ ಹೋರಾಟಕ್ಕೆ ಈ ಎರಡೂ ಸಮುದಾಯಗಳು ಕೈಜೋಡಿಸುವ ಮುಖಾಂತರ ಅನುದಾನವನ್ನು ವಾಪಸ್ ¥ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಸಮುದಾಯದವರ ಮತ ಪಡೆದ ಸಿದ್ದರಾಮಯ್ಯ ಇಂದು ಕೇವಲ ಒಂದು ಸಮುದಾಯ ಓಲೈಕೆಗೆ ಮುಂದಾಗಿದ್ದಾರೆ. ಅಹಿಂದ ನಾಯಕರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಇದೀಗ ಸಚಿವ ಜಮೀರ್ ಅಹಮದ್ ಮತ್ತು ಎಂಎಲ್ಸಿ ನಸೀರ್ ಅಹಮದ್ ಮಾತು ಕೇಳಿಕೊಂಡು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ರಾಜ್ಯದ ಜನರು ನೋಡುತ್ತಿದ್ದು, ಮುಂದೆ ಜನ ತಕ್ಕಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದ್ದರೂ ಸಚಿವ ಎಚ್.ಸಿ.ಮಹದೇವಪ್ಪ ಮೌನವಾಗಿದ್ದಾರೆ. ರೈತರ ಪರ ಎಂದು ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ದರಲಿತರನ್ನು ವಂಚಿಸುತ್ತಿದ್ದಾರೆ. ಕಾಂಗ್ರೇಸ್ ಸರ್ಕಾರ ದಲಿತರ ಪರ ಇಲ್ಲ ಎಂಬುದು ಸಾಬೀತಾಗಿದೆ ಎಂದರು.
ಸರ್ಕಾರದ ಪ್ರತಿ ಸಚಿವರ ಮೇಲೆಯೂ ನಾನಾ ಪ್ರಕರಣಗಳಿವೆ. ಆದರೆ, ಚಿಕ್ಕಬಳ್ಳಾಪುರದಲ್ಲಿ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ದುರ್ಬಳಸಿಕೊಂಡು ನಮ್ಮ ಸಂಸದರ ಮೇಲೆ ವಿನಾಕಾರಣ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.
ಸಚಿವರಾದ ಲಕ್ಷಿö್ಮÃ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ , ನಾಗೇಂದ್ರ ಸೇರಿದಂತೆ ಅನೇಕರ ಮೇಲೆ ಪತ್ರ ಬರೆದು ಸಾಕಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಚಿವರ ಮೇಲೂ ತನಿಖೆ ಮಾಡಿ ಎಂದು ಆಗ್ರಹಿಸಿದ ಅವರು, ಇಂದು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ೮ ನಿಗಮಗಳ ಕಚೇರಿಗೂ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕೆಜಿಎಫ್ ಮಾಜಿ ಶಾಸಕ ವೈ.ಸಂಪAಗಿ ಮಾತನಾಡಿ, ಜನಪರ ಕಲ್ಯಾಣ ಕಾರ್ಯಕ್ರಮಗಳ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರವು ದಲಿತ, ಹಿಂದುಳಿದ ಜಾತಿಗಳಿಗೆ ದ್ರೋಹ ಬಗೆದಿದೆ. ೮ ನಿಗಮಗಳಲ್ಲಿ ಸಾಧನೆ ಶೂನ್ಯವಾಗಿದೆ. ವಾಲ್ಮೀಕಿ ನಿಗಮದಂತೆ ಎಲ್ಲ ನಿಗಮಗಳಲ್ಲಿ ಹಗರಣ ನಡೆದಿರುವ ಅನುಮಾನವಿದ್ದು, ಕೂಡಲೇ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಒಂದು ಜನಾಂಗಕ್ಕೆ ಮೀಸಲಿಟ್ಟಿರುವ ಹಣವನ್ನು ಅದೇ ಜನಾಂಗಕ್ಕೆ ನೀಡಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಅನೇಕ ಬಾರಿ ಜನರ ಮುಂದೆ ವಿಚಾರ ಇಟ್ಟಿದ್ದೇವೆ. ಆದರೂ ಸರ್ಕಾರಕ್ಕೆ ಕಾಳಜಿಯಿಲ್ಲ. ಕೇವಲ ೮ ದಿನಗಳ ಮಟ್ಟಿಗೆ ಅಧಿವೇಶನ ಕರೆದಿರುವುದು ರಾಜ್ಯದ ಅಭಿವೃದ್ಧಿಗೆ ಅಲ್ಲ, ಕಾಂಗ್ರೆಸ್ ಅಭಿವೃದ್ಧಿಗೆ. ಹೀಗಾಗಿ ಅಧಿಕಾರದಿಂದ ತೊಲಗಿಸಬೇಕೆಂದು ಮನವಿ ಮಾಡಿದರು.
ನೂರಾರು ಹಗರಣಗಳನ್ನು ಮಾಡಿಕೊಂಡು ಬಂದಿರುವ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇರಲು ನೈತಿಕತೆಯಿಲ್ಲ. ರಾಜ್ಯದ ಏಳೂವರೆ ಕೋಟಿ ಜನರ ರಕ್ಷಣೆಗೆ ಬಿಜೆಪಿ ಸದಾ ಸಿದ್ಧವಿದ್ದು, ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ಶೀಘ್ರ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಎಸ್ಸಿ ಎಸ್ಟಿಗಳ ಅನುದಾನ ಬೇರೆ ಉದ್ದೇಶಕ್ಕೆ ಬಳಸಿದ್ದು, ಅಹಿಂದ ಪರ ಎಂದು ಹೇಳಲು ನೈತಿಕತೆಯಿಲ್ಲ. ಹೋರಾಟಗಳು ಮಾಡಿದರೂ ಕುರುಡ, ಕಿವುಡರಂತೆ ನಡೆದುಕೊಳ್ಳುತ್ತಿದ್ದು, ಕೂಡಲೇ ದಲಿತರ ಹಣ ಬೇರೆ ಕಾರ್ಯಕ್ಕೆ ಬಳಸದೆ ಅವರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ.ಮಹೇಶ್, ರಾಜು, ಮುಖಂಡರಾದ ಕಪಾಲಿ ಶಂಕರ್, ಸಾಮಾ ಬಾಬು, ನಾಮಾಲ್ ಮಂಜು, ತಿಮ್ಮರಾಯಪ್ಪ, ಅರುಣಮ್ಮ, ಮಮತಮ್ಮ ಮುಂತಾದವರಿದ್ದರು.
ಚಿತ್ರ ೧೧ ಕೆ.ಎಲ್.ಆರ್. ೦೩ : ರಾಜ್ಯ ಸರ್ಕಾರ ಎಸ್.ಸಿ. ಎಸ್.ಟಿ. ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದು, ಕೂಡಲೇ ವಾಪಸ್ಸು ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.