ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಮಿತಿ ಚುನಾವಣೆ: ಹನುಮಂತರಾಯಪ್ಪ, ಲೋಕೇಶ್‌ಗೆ ಗೆಲುವು

DSC_1894
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಮಿತಿಯ ಜಿಲ್ಲೆಯ 2 ಸದಸ್ಯತ್ವ ಸ್ಥಾನಕ್ಕೆ ಚುನಾಯಿತರಾದ ಆರ್.ಹನುಮಂತರಾಯಪ್ಪ, ಡಿ.ಎನ್.ಲೋಕೇಶ್ ಅವರನ್ನು ಮತ ಎಣಿಕೆ ನಡೆದ ತುಮಕೂರಿನ ಕಾಳಿದಾಸ ಪಿಯು ಕಾಲೇಜಿನಲ್ಲಿ ಸಮಾಜದ ಮುಖಂಡರು ಸನ್ಮಾನಿಸಿದರು. ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಿಗೌಡ, ಕೆಂಪರಾಜು, ಕೃಷ್ಣಮೂರ್ತಿ, ಸಿದ್ದಲಿಂಗೇಗೌಡ, ಆಶಾ ಟ್ರಾವೆಲ್ಸ್ ಬಾಬು, ಶಿವಶಂಕರ್ ಮತ್ತಿತರರು ಇದ್ದರು.
Published on

ತುಮಕೂರು: ತೀವ್ರ ಹಣಾಹಣಿಯಿಂದ ಕೂಡಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಮಿತಿಯ ಜಿಲ್ಲಾ ಸದಸ್ಯತ್ವ ಸ್ಥಾನಕ್ಕೆ ಆರ್.ಹನುಮಂತರಾಯಪ್ಪ, ಲೋಕೇಶ್ ಡಿ.ನಾಗರಾಜಯ್ಯ ಚುನಾಯಿತರಾಗಿದ್ದಾರೆ.

ಡಿ.12 ರಂದು ಚುನಾವಣೆ ನಡೆದಿದ್ದು, 2 ಸ್ಥಾನಕ್ಕೆ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಸಂಘದ 31181 ಸದಸ್ಯರು ಮತದಾನದ ಹಕ್ಕು ಹೊಂದಿದ್ದು 24193 ಮಂದಿ ಹಕ್ಕು ಚಲಾಯಿಸಿದ್ದರು. ಜಿಲ್ಲೆಯಲ್ಲಿ ಶೇ.77.59 ಮತದಾನವಾಗಿತ್ತು. ಬುಧವಾರ ಕಾಳಿದಾಸ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು.

ಡಿ.ನಾಗರಾಜಯ್ಯ ಪುತ್ರನಿಗೆ ಗೆಲುವು: ಮಾಜಿ ಸಚಿವ ಡಿ.ನಾಗರಾಜಯ್ಯ ಪುತ್ರ ಡಿ.ಎನ್.ಲೋಕೇಶ್ 11027 ಮತ ಹಾಗೂ ಆರ್.ಹನುಮಂತರಾಯಪ್ಪ 14901 ಮತ ಪಡೆದು ಗೆಲುವು ಸಾಧಿಸಿದರು. ಇನ್ನುಳಿದಂತೆ ಬೆಳ್ಳಿ ಲೋಕೇಶ್ 8022 ಮತ, ಸುಜಾತಾ ನಂಜೇಗೌಡ 6261 ಮತ, ಡಾ.ಸಿ.ಕೆ.ಎಂ.ಗೌಡ 4042 ಮತ, ಕಪನಿಗೌಡ 211 ಮತ, ಶಿವರಾಮಯ್ಯ 137 ಮತ ಪಡೆದರು.

ಹನುಮಂತರಾಯಪ್ಪ ಕಳೆದ ಬಾರಿ 54 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಅನುಕಂಪ ಈ ಬಾರಿ ಕೈಹಿಡಿದಿದೆ. ಕೊರಟಗೆರೆ ತಾಲೂಕಿನ ಕೋಳಾಲದ ಹನುಮಂತರಾಯಪ್ಪ ಈ ಬಾರಿ ಅತಿಹೆಚ್ಚು ಮತ ಪಡೆದು ಚುನಾಯಿತರಾದರು. ಹೆಚ್ಚು ಸದಸ್ಯರನ್ನು ಹೊಂದಿರುವ ಕುಣಿಗಲ್ ತಾಲೂಕಿನ ಲೋಕೇಶ್‌ಗೆ ತಂದೆ ಮಾಜಿ ಸಚಿವ ಡಿ.ನಾಗರಾಜಯ್ಯ ನಾಮಬಲ ಕೈಹಿಡಿದಿದೆ. ಬೆಳ್ಳಿಲೋಕೇಶ್, ಸುಜಾತಾ ನಂಜೇಗೌಡ, ಡಾ.ಸಿ.ಕೆ.ಎಂ.ಗೌಡ ಉತ್ತಮ ಸ್ಪರ್ಧೆ ನೀಡಿದ್ದರಾದರೂ ಉತ್ತಮ ಪೈಪೋಟಿ ನೀಡಿದ ಬೆಳ್ಳಿಲೋಕೇಶ್ 3005 ಮತಗಳ ಅಂತರದಿಂದ ಶರಣಾದರು.

ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಚುನಾಯಿತರಾದ ಆರ್.ಹನುಮಂತರಾಯಪ್ಪ ಹಾಗೂ ಡಿ.ಎನ್.ಲೋಕೇಶ್ ಅವರನ್ನು ಸಮಾಜದ ಮುಖಂಡರು ಸನ್ಮಾನಿಸಿದರು.

ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಜಿಲ್ಲೆಯಲ್ಲಿ ಒಕ್ಕಲಿಗರ ಭವನ ನಿರ್ಮಾಣ, ಆಸ್ಪತ್ರೆ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಮೂಲಕ ಜನಾಂಗದವರ ಋಣ ತೀರಿಸಲು ಶ್ರಮಿಸುವೆ. ಆರ್.ಹನುಮಂತರಾಯಪ್ಪ ವಿಜೇತ ಅಭ್ಯರ್ಥಿ ನಮ್ಮ ಸಮಾಜದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ನನ್ನ ಕೈಲಾದಷ್ಟು ಮಟ್ಟಿಗೆ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜಿಲ್ಲೆಗೆ ದೊರೆಯುವ ಎಲ್ಲ ಸೌಕರ್ಯಗಳನ್ನು ಸಂಘದ ವತಿಯಿಂದ ಒದಗಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನಮ್ಮ ತಂದೆಯವರ ಕೆಲಸ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ. ಜನರ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ. ಡಿ.ಎನ್.ಲೋಕೇಶ್ ವಿಜೇತ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net