ರಾಜಕಾಲುವೆಗಳ ಒತ್ತುವರಿ / ಮಳೆ ನೀರು ರೈತರ ತೋಟಗಳ ಮತ್ತು ಗ್ರಾಮಗಳಿಗೆ ನುಗ್ಗುತ್ತಿರುವುದು / ಮೌನವಹಿಸಿರುವ ಜಿಲ್ಲಾಡಳಿತ / ರಾಜಕಾಲುವೆಗಳನ್ನು ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಇತ್ತೀಚೆಗೆ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೆರೆಕುಂಟೆಗಳು ತುಂಬಿ ಕೋಡಿ ಹರಿಯುತ್ತಿವೆ. ರಾಜಕಾಲುವೆಗಳು ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ಮಳೆನೀರು ರೈತರ ತೋಟಗಳಿಗೆ ನುಗ್ಗುತ್ತಿರುವುದರಿಂದ ರೈತರು ಬೆಳೆದ ಫಸಲು ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಇದರಿಂದ ರೈತರಿಗೆ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದ್ದು, ರೈತರು ಆತಂಕಕ್ಕೆ ಒಳಗಾಗುವಂತೆ ಆಗಿದೆ.

ಕೋಲಾರ ಸುತ್ತಮುತ್ತ ಇರುವ ಬೆಟ್ಟಗಳ ಮೇಲಿನ ಮಳೆನೀರು ರಾಜಕಾಲುವೆಗಳ ಮೂಲಕ ಕೆರೆಗಳಿಗೆ ಹರಿಯುತ್ತಿವೆ. ರಾಜಕಾಲುವೆಗಳು ಒತ್ತುವರಿಯಾಗಿರುವ ಹಿನ್ನಲೆಯಲ್ಲಿ ಕೆರೆಗಳಿಗೆ ಮಳೆನೀರು ಹರಿದು ಹೋಗಲು ಸಾಧ್ಯವಾಗದ ರಾಜಕಾಲುವೆಗಳ ಮೇಲೆ ಹರಿದು ರೈತರ ತೋಟಗಳ ಮತ್ತು ಗ್ರಾಮಗಳಿಗೆ ನುಗ್ಗುತ್ತಿರುವುದರಿಂದ ಗ್ರಾಮಗಳ ರಸ್ತೆಗಳು ಹಾಳಾಗಿದ್ದು, ರೈತರ ತೋಟಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ತಾಲ್ಲೂಕಿನ ಗರುಡನಹಳ್ಳಿ ಬೆಟ್ಟಗಳಿಂದ ಹರಿದು ಹೋಗುವ ನೀರಿನ ರಾಜಕಾಲುವೆಗಳು ಒತ್ತುವರಿಯಾಗಿರುವ ಕಾರಣ ಕೆರೆಗಳಿಗೆ ಸೇರಬೇಕಾಗಿರುವ ನೀರು ರೈತರ ತೋಟಗಳಿಗೆ ನುಗ್ಗುವಂತಾಗಿದೆ ಎಂದು ಗರುಡನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗರುಡನಹಳ್ಳಿ ಬೆಟ್ಟಗಳ ನೀರು ಸೀಪುರಕ್ಕೆ ಕೆರೆಗೆ ಹರಿದು ಹೋಗುವ ಸುಮಾರು ೩೩ ಅಡಿಗಳ ರಾಜಕಾಲುವೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ ಮಳೆ ನೀರು ತೋಟಗಳಿಗೆ ಮತ್ತು ಗರುಡನಹಳ್ಳಿ ಗ್ರಾಮಕ್ಕೆ ನುಗ್ಗಿ ರಸ್ತೆಗಳು ಹಾಳಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಾಜಕಾಲುವೆಗಳನ್ನು ತೆರವುಗೊಳಿಸದೇ ಇದ್ದರೆ ಮಳೆನೀರು ಈಗ ತೋಟಗಳಿಗೆ ನುಗ್ಗುತ್ತಿವೆ ಮುಂದೆ ಗ್ರಾಮಗಳಿಗೆ ನುಗ್ಗುವ ಕಾಲ ಬರುತ್ತದೆ ಎಂದು ಹೆಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಉತ್ತುಮ ಮಳೆಯಾಗಿರುವ ಕಾರಣ ಮಳೆ ನೀರು ಕೆರೆಗಳಿಗೆ ಹೋಗಲು ರಾಜಕಾಲುವೆಗಳು ಇಲ್ಲದೇ ಇರುವುದರಿಂದ ರೈತರ ತೋಟಗಳಿಗೆ ಮತ್ತು ರಾಗಿ ಹೊಲಗಳಿಗೆ ನುಗ್ಗುವಂತಾಗಿದೆ. ಕೆ.ಸಿ.ವ್ಯಾಲಿ ನೀರು ಇದೇ ಕಾಲುವೆಗಳಲ್ಲಿ ಹರಿಯುತ್ತಿರುವುದರಿಂದ ಮಳೆಯ ನೀರು ಸೇರಿ ನೀರಿನ ಹರಿವಿನ ಪ್ರಮಾಣ ಹೆಚ್ಚಾದ ಕಾರಣ ಕಿರಿದಾದ ಕಾಲುವೆಗಳಿರುವ ಕಾರಣ ತೋಟಗಳಿಗೆ ಮತ್ತು ಗ್ರಾಮಗಳಿಗೆ ನುಗ್ಗುವಂತಾಗಿದೆ. ಹಾಗೂ ಕಾಲುವೆಗಳ ಪಕ್ಕದಲ್ಲಿರುವ ರಸ್ತೆಗಳ ಮೇಲೆ ಹರಿಯುವಂತೆ ಆಗಿದೆ. ಕೂಡಲೇ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಬೇಕಾಗಿರುತ್ತದೆ. ಸದ್ಯಕ್ಕೆ ೨ ದಿನಗಳಿಂದ ಮಳೆಯಿಲ್ಲ. ಮತ್ತೆ ಮಳೆ ಮುಂದುವರೆದರೆ ಉತ್ತರ ಕರ್ನಾಟಕದಲ್ಲಿ ಮಳೆ ನೀರು ಗ್ರಾಮಗಳಿಗೆ ನುಗ್ಗಿದಂತೆ ಕೋಲಾರ ಜಿಲ್ಲೆಯಲ್ಲಿ ನೀರು ನುಗ್ಗುವ ಕಾಲ ದೂರವಿಲ್ಲ ಎಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೋಟ್

ಗರುಡನಹಳ್ಳಿ ಸುತ್ತಮುತ್ತ ಬೆಟ್ಟಗಳ ಮೇಲಿಂದ ನೀರು ಸೀಪುರ ಕೆರೆ ಮೂಲಕ ಇತರೆ ಕೆರೆಗಳಿಗೆ ಹೋಗಬೇಕಾಗಿತ್ತು. ರಾಜಕಾಲುವೆಗಳ ಒತ್ತುವರಿಯಿಂದಾಗಿ ನೀರು ರೈತರ ತೋಟಗಳಿಗೆ ನುಗ್ಗುವಂತಾಗಿದೆ. ಹಾಗೂ ಗ್ರಾಮದ ರಸ್ತೆಗಳು ಹಾಳಾಗಿವೆ. ರಾಜಕಾಲುವೆಗಳ ತೆರವು ಮಾಡಲು ತಾಲ್ಲೂಕು ಕಛೇರಿಗೆ ಅನೇಕ ಬಾರಿ ದೂರು ನೀಡಲಾಗಿತ್ತು. ಕೆಲವರು ರಾಜಕಾಲುವೆ ಅಲ್ಲದೆ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿAದ ಕೋಳಿಫಾರಂ, ಇಟ್ಟಿಗೆ ಫ್ಯಾಕ್ಟರಿಗಳಿಗೆ ಹೋಗುವ ಕೂಲಿ ಕಾರ್ಮಿಕರು ಪರದಾಡುವಂತೆ ಆಗಿದೆ. ಮಂಗಳವಾರ ಜೆಸಿಬಿ ಮೂಲಕ ಸ್ವಂತ ಖರ್ಚಿನಲ್ಲಿ ರಸ್ತೆಗಳನ್ನು ದುರಸ್ಥಿ ಮಾಡಲಾಗಿದೆ ಹಾಗೂ ರಾಜಕಾಲುವೆಗಳನ್ನು ತೆರವುಗೊಳಿಸುವ ಕೆಲಸ ತತ್ಕಾಲಿಕವಾಗಿ ಮಾಡಲಾಗುತ್ತಿದೆ.

-ಲೋಕೇಶ್, ಗ್ರಾಮಪಂಚಾಯ್ತಿ ಸದಸ್ಯ, ಗರುಡನಹಳ್ಳಿ.

ಚಿತ್ರ ೧೪ ಕೆ.ಎಲ್.ಆರ್. ೦೪ : ಗರುಡನಹಳ್ಳಿ ಗ್ರಾಮಕ್ಕೆ ಮತ್ತು ತೋಟಗಳಿಗೆ ಮಳೆ ನೀರು ನುಗ್ಗಿದ್ದು, ಗ್ರಾಮಪಂಚಾಯ್ತಿ ಸದಸ್ಯ ಲೋಕೇಶ್ ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net