ರಸಗೊಬ್ಬರದಿಂದ ಭೂಮಿ ವಿಷಮಯ

t d rajegowda photo
Published on

ಬಾಳೆಹೊನ್ನೂರು: ಕೃಷಿಕರು ಜೈವಿಕ, ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವ ಮೂಲಕ ಭೂಮಿಯ ಫಲವತ್ತತೆ ಉಳಿಸಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಗ್ರೀನ್ ಬಯೋಟೆಕ್ ಸಂಸ್ಥೆಯ ಜೈವಿಕ ಗೊಬ್ಬರ ತಯಾರಿಕಾ ಘಟಕ, ಪ್ರಯೋಗಾಲಯ ಹಾಗೂ ಜೈವಿಕ ಗೊಬ್ಬರವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಅನಗತ್ಯವಾದ ರಸಗೊಬ್ಬರ ಬಳಕೆ ಪರಿಣಾಮ ಭೂಮಿಯ ಫಲವತ್ತತೆ ಕಡಿಮೆ ಆಗುತ್ತಿದೆ. ಕೃಷಿಯಲ್ಲಿ ಹಲವು ಸಮಸ್ಯೆಗಳನ್ನು ನಾವೇ ತಂದುಕೊಳ್ಳುತ್ತಿದ್ದೇವೆ. ಹಿಂದಿನ ಕಾಲದ ಪ್ರಕೃತಿ, ವಾತಾವರಣ ಎಲ್ಲರಿಗೂ ಪೂರಕವಾಗಿತ್ತು. ಆದರೆ ಈಗ ಮನುಷ್ಯನಿಗೆ ದುರಾಸೆ ಹೆಚ್ಚಾಗಿ ಅಧಿಕ ಬೆಳೆಯ ಆಸೆಯಿಂದ ವರ್ಷಕ್ಕೆ ಮೂರ‌್ನಾಲ್ಕು ಬಾರಿ ರಸಗೊಬ್ಬರವನ್ನು ಭೂಮಿಗೆ ನೀಡಿ ವಿಷಮಯ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಣ್ಣು ನೈಜತೆ ಕಳೆದುಕೊಳ್ಳಲಿದೆ. ಮಣ್ಣು ನೈಜತೆಯನ್ನು ಕಳೆದುಕೊಂಡರೆ ಅದರಲ್ಲಿನ ಜೀವವೇ ಕಳೆದುಹೋಗಲಿದೆ. ನಾನು ಸಹ ಕೃಷಿಕನಾಗಿದ್ದು ಹೊಸದುರ್ಗದಲ್ಲಿ 80 ಎಕರೆ ಭೂಮಿಯಲ್ಲಿ ಸಂಪೂರ್ಣ ಸಾವಯವ, ಜೈವಿಕ ಗೊಬ್ಬರವನ್ನು ಬಳಸಿ ದಾಳಿಂಬೆ ಬೆಳೆಯನ್ನು ಬೆಳೆದು ಮಾರುಕಟ್ಟೆಯಲ್ಲಿ ಒಳ್ಳೆಯ ದರ ಪಡೆದಿದ್ದೇನೆ ಎಂದು ತಿಳಿಸಿದರು.

ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ಭವಿಷ್ಯದಲ್ಲಿ ಕಾಫಿಯನ್ನು 4 ಅಥವಾ 5ನೇ ಸ್ಥಾನಕ್ಕೆ ತರಬೇಕು ಎಂಬ ಚಿಂತನೆ ಕಾಫಿ ಮಂಡಳಿಯಲ್ಲಿದ್ದು, ಈ ಉದ್ದೇಶ ಈಡೇರಲು ಕಾಫಿ ಬೆಳೆಯ ಉತ್ಪಾದನೆ ಹೆಚ್ಚುಗೊಳಿಸಬೇಕಿದೆ. ಬೆಳೆಗಾರರು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಕಳೆದ ವರ್ಷ ಕಾಫಿ ಸಂಶೋಧನಾ ಕೇಂದ್ರದಿಂದ 5 ಸಾವಿರ ಮಣ್ಣಿನ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಿದ್ದು ಈ ಪರೀಕ್ಷೆಗಳಲ್ಲಿ ಹೆಚ್ಚಾಗಿ ಮಣ್ಣಿನ ಹುಳಿಸಾರ ಕಂಡುಬಂದಿದೆ. ಇದರ ನಿರ್ವಹಣೆಗೆ ಜೈವಿಕ ಗೊಬ್ಬರ ಬಳಸುವುದು ಅಗತ್ಯವಾಗಿದೆ ಎಂದರು.

ಭಾರತದಲ್ಲಿ 1.45 ಲಕ್ಷದಷ್ಟು ಬೆಳೆಗಾರರು ಕಾಫಿಯನ್ನು ಸಾವಯವ ಕೃಷಿ ಮೂಲಕ ಬೆಳೆಯುತ್ತಿದ್ದು, ಇಂತಹ ಬೆಳೆಗೆ ಉತ್ತಮ ಬೆಲೆಯಿದೆ. ಕಾಫಿ ಬೆಳೆಗಾರರು ಕಾಫಿಗೆ ಯಾವ ಬೆಲೆ ಇರುತ್ತದೋ ಆ ಬೆಲೆಗೆ ಮಾರಾಟ ಮಾಡಿ ಆನಂದ ಪಡೆಯಬೇಕು. ಹೆಚ್ಚು ಬೆಲೆಗೆ ಕಾಯುತ್ತ ಕುಳಿತರೆ ಇರುವ ಬೆಲೆಯನ್ನು ಕಳೆದುಕೊಳ್ಳವ ಸ್ಥಿತಿ ಬರಬಹುದು ಎಂದು ಹೇಳಿದರು.

ಕಾಫಿ ಮಂಡಳಿ 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಂಶೋಧನಾ ಕೇಂದ್ರ ಸಂಶೋಧನೆಗಳನ್ನು ನಡೆಸುತ್ತಿದ್ದು ಆಸಕ್ತರಿಗೆ ಸಂಶೋಧನೆಗಾಗಿ ಬ್ಲಾಕ್‌ಗಳನ್ನು ವಿತರಿಸಲಾಗಿದೆ ಎಂದರು.

ಮುನಿರಾಬಾದ್ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ತಿರುಮಲೇಶ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಗ್ರೀನ್ ಬಯೋಟೆಕ್ ವ್ಯವಸ್ಥಾಪಕ ಚಂದ್ರಕುಮಾರ್, ಬಿ.ವಿ.ಸುಜಿತ್, ಪ್ರಮುಖರಾದ ಶ್ಯಾಮ್ ಸುಂದರ್, ವಿ.ಟಿ.ತೋಮಸ್, ಎಂ.ಎಸ್.ಜಯಪ್ರಕಾಶ್, ಎಂ.ಎಸ್.ಅರುಣೇಶ್, ಬಸವರಾಜ್ ಹೊನ್ನಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net