

ಕೆ.ಆರ್.ನಗರ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ರಾಜಕೀಯ ದುರುದ್ದೇಶದಿಂದ ಶಾಸಕ ಡಿ.ರವಿಶಂಕರ್ ಸೂಚನೆಯಂತೆ ಏಕಾಏಕಿ ವಜಾಗೊಳಿಸಲಾಗಿದೆ ಎಂದು ಬುಧವಾರ ತಾಲೂಕು ಕಚೇರಿ ಮುಂದೆ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ನನ್ನ ಅವಧಿಯಲ್ಲಿ ಸುಮಾರು 300 ಜನರಿಗೆ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೌಕರಿ ಕೊಡಿಸಿದ್ದು, 10ರಿಂದ15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ 30ಕ್ಕೂ ಹೆಚ್ಚು ನೌಕರರನ್ನು ರಾಜಕೀಯ ಪ್ರಭಾವದಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು.
ನೌಕರರು ತಪ್ಪು ಮಾಡಿದ್ದರೆ ನೋಟಿಸ್ ನೀಡಿ ನಂತರ ಕ್ರಮ ಕೈಗೊಳ್ಳಬೇಕು. ಆದರೆ, ಯಾವುದೇ ನೋಟಿಸ್ ನೀಡದೆ ನೀವು ಜೆಡಿಎಸ್ ಪಕ್ಷದ ಬೆಂಬಲಿಗರು, ಆ ಪಕ್ಷಕ್ಕೆ ಮತ ನೀಡಿದ್ದೀರಿ ಎಂದು ಕೆಲಸದಿಂದ ತೆಗೆಯಲಾಗಿದೆ ಎಂದು ದೂರಿದರು. ನೌಕರಿಯನ್ನೇ ನಂಬಿಕೊಂಡು ಹಲವು ಕುಟುಂಬಗಳು ಜೀವನ ನಡೆಸುತ್ತಿದ್ದು, ಇದೀಗ ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮವಹಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಗುತ್ತಿಗೆ ನೌಕರರ ಕೆಲಸದಲ್ಲಿ ಲೋಪ ಕಂಡು ಬಂದರೆ ನೋಟಿಸ್ ನೀಡಿ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಬೇಕು. ಅದನ್ನು ಬಿಟ್ಟು ಈ ರೀತಿ ಸಾ.ರಾ.ಮಹೇಶ್ ಕಡೆಯವರು ಎಂದು ಕೆಲಸದಿಂದ ತೆಗೆದಿರುವುದು ಕುಟುಂಬಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸರಿಪಡಿಸದಿದ್ದರೆ ಧರಣಿ ಕೂರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಎಚ್.ಸಿ.ಕುಮಾರ್, ಮೆಡಿಕಲ್ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ವಕ್ತಾರ ಕೆ.ಎಲ್.ರಮೇಶ್, ಯುವ ಜೆಡಿಎಸ್ ಅಧ್ಯಕ್ಷ ಹಂಪಾಪುರ ಸುರೇಶ್, ನಗರ ಜೆಡಿಎಸ್ ಕಾರ್ಯದರ್ಶಿ ರುದ್ರೇಶ್, ಪುರಸಭಾ ಸದಸ್ಯ ಕೆ.ಎಲ್.ಜಗದೀಶ್, ಉಮೇಶ್, ಸಂತೋಷ್‌ಗೌಡ, ಮಾಜಿ ಅಧ್ಯಕ್ಷ ವೈ.ಆರ್.ಪ್ರಕಾಶ್, ಮಾಜಿ ಸದಸ್ಯ ರೇವಣ್ಣ ಸುಬ್ರಹ್ಮಣ್ಯ, ತಾಪಂ ಮಾಜಿ ಅಧ್ಯಕ್ಷೆ ಭಾಗ್ಯಶಂಕರ್, ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಆರೋಗ್ಯ ರಕ್ಷಾ ಕಮಿಟಿ ಮಾಜಿ ಸದಸ್ಯ ಸಾ.ರಾ.ನಾಗೇಶ್ ಇತರರು ಇದ್ದರು.