ರಂಭಾಪುರಿ ಪೀಠದ ಅಭಿವೃದ್ಧಿ ಗೆ 25 ಲಕ್ಷ ರೂ.

12bhr 1 balehonur
Published on

ಬಾಳೆಹೊನ್ನೂರು: ಪ್ರಮುಖ ಯಾತ್ರಾ ಕ್ಷೇತ್ರ ರಂಭಾಪುರಿ ಪೀಠದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಕೆಆರ್‌ಇಡಿಎಲ್‌ನಿಂದ 25 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದು ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಸೋಮವಾರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ 25 ಲಕ್ಷ ರೂ. ಚೆಕ್ ಹಸ್ತಾಂತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಭಾಪುರಿ ಪೀಠಕ್ಕೆ ನಿತ್ಯವೂ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದು ಇದೊಂದು ಪವಿತ್ರ ಯಾತ್ರಾ ಕ್ಷೇತ್ರವಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ಪ್ರಮುಖವಾಗಿ ರಂಭಾಪುರಿ ಪೀಠಕ್ಕೆ ತೆರಳುವ ರಸ್ತೆ ಅಭಿವೃದ್ಧಿ, ಶ್ರೀ ಜಗದ್ಗುರು ರೇಣುಕಾಚಾರ್ಯರ 51 ಅಡಿ ಎತ್ತರದ ವಿಗ್ರಹ ನಿರ್ಮಾಣದ ಸ್ಥಳ ಅಭಿವೃದ್ಧಿ, ಸಮುದಾಯ ಭವನದ ಅಭಿವೃದ್ಧಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ 25 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.

ಜಗದ್ಗುರುಗಳ ಮಾರ್ಗದರ್ಶನದಲ್ಲಿ ಹಾಗೂ ಜನರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಗ್ರಾಪಂ ಸದಸ್ಯರಾದ ಎಂ.ಜೆ.ಮಹೇಶ್ ಆಚಾರ್ಯ, ಬಿ.ಸಿ.ಸಂತೋಷ್ ಕುಮಾರ್, ಇಬ್ರಾಹಿಂ ಶಾಫಿ, ಪಿಎಸಿಎಸ್ ನಿರ್ದೇಶಕ ಕೆ.ಕೆ.ಗೌತಮ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀನ್, ಪ್ರಮುಖರಾದ ಶಿವಶಂಕರ್, ಕೆ.ಟಿ.ಗೋವಿಂದೇಗೌಡ, ಸುಧಾಕರ್, ಪ್ರಭಾಕರ್ ಶೆಟ್ಟಿ, ವಿನುತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net