

ತಿ.ನರಸೀಪುರ: ಪ್ರತಿಯೊಬ್ಬ ಶಿಕ್ಷಕರೂ ಸಚ್ಚಾರಿತ್ರೃ ಹಿನ್ನೆಲೆಯಲ್ಲಿ ನೈತಿಕತೆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ಶಿಕ್ಷಣದ ಮೂಲಕ ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿವು ಮೂಡಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.
ಪಟ್ಟಣದ ಹಳೇ ತಿರುಮಕೂಡಲಿನ ಮೈಸೂರು ರಸ್ತೆಯಲ್ಲಿರುವ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ತಾಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಇಂದಿನ ಯುವ ಜನತೆಗೆ ನೈತಿಕತೆ ಪಾಠದ ಅಗತ್ಯವಿದೆ. ಶಿಕ್ಷಕರ ವೃತ್ತಿ ಧರ್ಮ ಸಮಾಜಕ್ಕೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ದೇಶದ ಶೇ.95ಕ್ಕೂ ಬಹುಸಂಖ್ಯಾತ ಜನರಿಗೆ ಶಿಕ್ಷಣ ನಿರಾಕರಿಸಿದ ಮನುವಾದದಿಂದ ಸ್ವಾತಂತ್ರೃದ ನಂತರದ ದೇಶದಲ್ಲಿ ಶೇ.10ರಷ್ಟು ಶಿಕ್ಷಣದ ಪ್ರಮಾಣ ಇರಲಿಲ್ಲ. ದೇಶವನ್ನು ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದ್ದ ಬ್ರಿಟಿಷರ ಕಾಲದಲ್ಲಿ ಲಾರ್ಡ್ ಮೆಕಾಲೆ ಅವರು ಸಾರ್ವತ್ರೀಕರಣಗೊಳಿಸಿ ಶಿಕ್ಷಣವನ್ನು ಎಲ್ಲರೂ ಕಲಿಯಲು ಮುನ್ನುಡಿ ಬರೆದರು ಎಂದರು.
ಪುಲೆ ದಂಪತಿ, ಹಿಂದುಳಿದ ವರ್ಗಗಳು ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಆರಂಭಿಸಿ 20ಕ್ಕೂ ಹೆಚ್ಚು ಶಾಲೆಗಳನ್ನು ತೆರೆದರು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶಿಕ್ಷಣವನ್ನು ಮೂಲ ಹಕ್ಕನ್ನಾಗಿಸಿ ವೈಚಾರಿಕತೆಯ, ವೈಜ್ಞಾನಿಕ ಶಿಕ್ಷಣವನ್ನು ಪ್ರತಿಪಾದಿಸಿದರು. 1954ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿ ಜಾರಿಗೊಳಿಸಿದ ಶಿಕ್ಷಣ ನೀತಿಯಿಂದ ಶೇ.30ರಷ್ಟು ಹಾಗೂ 1984ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಜಾರಿಗೊಳಿಸಿದ ಶಿಕ್ಷಣ ನೀತಿಯಿಂದ ಶೇ.75ರಷ್ಟು ಪ್ರಗತಿಯನ್ನು ಸಾಧಿಸಲಾಯಿತು. ಈಗಿನ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ಮನುವಾದವನ್ನು ಅರ್ಥೈಸುವಂತಿದ್ದು, ಅದಕ್ಕೆ ದೇಶದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕರು ಮಕ್ಕಳ ಭೌದ್ಧಿಕ ಸಾಮರ್ಥ್ಯವನ್ನು ಅರಿತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬೋಧನೆ ಮಾಡಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಕಲಿಕೆಯಲ್ಲಿ ದುರ್ಬಲ ಎಂದು ಕಡೆಗಣಿಸಬಾರದು. ಮೈಸೂರಿನಲ್ಲಿ ಬೋಧಕರಾಗಿದ್ದ ರಾಧಾಕೃಷ್ಣನ್ ಅವರು ರಾಷ್ಟ್ರಪತಿ ಆಗಿದ್ದಾಗ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಹುಟ್ಟಿದ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಶಿಕ್ಷಕರ ಸಾಮಾಜಿಕ ಜವಾಬ್ದಾರಿ ಹಾಗೂ ವೃತ್ತಿಯ ಮಹತ್ವದ ಬಗ್ಗೆ ರಾಜ್ಯ ಸಂಪನ್ಮೂಲ ವ್ಯಕ್ತಿ ಎಸ್.ತುಕಾರಾಂ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿದರು. ತಾಲೂಕಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ 48 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಮೈಮುಲ್ ನಿರ್ದೇಶಕ ಆರ್.ಚಲುವರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶೋಭಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ.ಮಾದಪ್ಪ, ಪ್ರಧಾನ ಕಾರ್ಯದರ್ಶಿ ಕುಪ್ಯಾ ಪುಟ್ಟಸ್ವಾಮಿ, ಕೆ ಪಿ ಮಹದೇವಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಬಿಆರ್‌ಪಿ ನಾಗೇಶ್, ಸಿಆರ್‌ಪಿ ಸೋಸಲೆ ನಾಗೇಶ್, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಕೆ.ಜ್ಞಾನಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ತಾಪಂ ಮಾಜಿ ಸದಸ್ಯರಾದ, ನರಸಿಂಹ ಮಾದನಾಯಕ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ಪುರಸಭೆ ಮಾಜಿ ಸದಸ್ಯ ಎಸ್.ಸಿದ್ದೇಗೌಡ, ಹಿಂದುಳಿದ ವರ್ಗಗಳ ಅಧ್ಯಕ್ಷ ಎ.ಎನ್.ಸ್ವಾಮಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಮುಖಂಡರು ಹಾಜರಿದ್ದರು.