ಯುವಕರು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ

ಕಡೂರು ಪೇಟೆಯ ಶ್ರೀರಾಮ ದೇವಸ್ಥಾನದಲ್ಲಿ ಪಂಚಲೋಹದ ಮೂರ್ತಿಗಳ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಕೆ.ಎಸ್.ಆನಂದ್ ಹಾಗೂ ಭಂಡಾರಿ ಶ್ರೀನಿವಾಸ್ ಅವರನ್ನು ದೇವಸ್ಥಾನ ಸಮಿತಿ ಪದಾಧಿಕಾರಿಗಳು ಅಭಿನಂದಿಸಿದರು. ಮೋಹನ್‌ಕುಮಾರ್, ಪಂಗ್ಲಿ ಮಂಜುನಾಥ್, ರವಿಕುಮಾರ್, ಶ್ರೀಧರ್ ಮತ್ತಿತರರಿದ್ದರು.
Published on

ಕಡೂರು: ಧಾರ್ಮಿಕವಾಗಿ ಹೆಚ್ಚು ತೊಡಗಿಸಿಕೊಂಡಿರುವ ಯುವ ಸಮೂಹದ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ದೊಡ್ಡಪೇಟೆಯ ಶ್ರೀರಾಮ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಭಾನುವಾರ ಪಂಚಲೋಹದ ರಾಮಮೂರ್ತಿ ಪರಿವಾರದ ಪ್ರತಿಷ್ಠಾಪನೆ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ಚಿಕ್ಕ ಗುಡಿಯಲ್ಲಿ ಪೂಜಾ ಕಾರ್ಯಗಳು ನೆರವೇರುತ್ತಿದ್ದವು. ದೇವಸ್ಥಾನದಲ್ಲಿ ಅನೇಕ ಹಿರಿಯರ ಪರಿಶ್ರಮ ಮತ್ತು ಇಂದಿನ ಯುವಕರ ತಂಡದ ಬೆಂಬಲದೊಂದಿಗೆ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆಗೆ ಒತ್ತು ನೀಡಿರುವುದರಿಂದ ಧಾರ್ಮಿಕತೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ನನ್ನ ಸಹಕಾರ ನಿರಂತರವಾಗಿರಲಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಈ ಭಾಗದ ಮಹಿಳೆಯರ ಕಾಳಜಿಯಿಂದ ರಾಮ ದೇವಸ್ಥಾನಕ್ಕೆ ಹೊಸ ರೂಪ ನೀಡಲು ಸಾಧ್ಯವಾಗಿದೆ. ಶ್ರೀರಾಮ ಯುವಕ ಸಂಘದಿಂದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಶ್ರೀರಾಮನ ಆದರ್ಶದ ತಳಹದಿಯಲ್ಲಿ ಸಾಗಬೇಕಿದೆ ಎಂದು ಸಲಹೆ ನೀಡಿದರು.

ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ಯುವಕರ ಒಗ್ಗಟ್ಟಿನ ಬಲ ಮತ್ತು ಭಕ್ತರ ಅನನ್ಯ ಸಹಕಾರದಿಂದ ದೇವಸ್ಥಾನಕ್ಕೆ ವಿಶೇಷವಾದ ಉತ್ಸವಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಪ್ರತಿಷ್ಠಾಪನೆ ಮಹೋತ್ಸವ ಅಂಗವಾಗಿ ರಾಮತಾರಕ ಹೋಮ ಹಾಗೂ ಸಂಕಲ್ಪ ಸೇವೆಗಳು ನಡೆದು ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಪುರಸಭೆ ಸದಸ್ಯ ಮರುಗುದ್ದಿ, ಮುಖಂಡ ಪಂಗ್ಲಿ ಮಂಜುನಾಥ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಜಿ.ರವಿಕುಮಾರ್, ಶ್ರೀಧರ್ ನಾಗು, ನಿರಂಜನ್ ದಳವಾಯಿ, ಕೆ.ಎಸ್.ಚೇತನ್, ಪ್ರದೀಪ್, ಪೇಟೆ ಕುಮಾರ್, ಚಿನ್ಮಯ್, ಶ್ರೀನಿವಾಸ್, ರವಿಕುಮಾರ್, ಸೋಮಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net