

ಚಿತ್ರದುರ್ಗ: ಪ್ರೀತಿಸುವಂತೆ ಹಿಂದೆ ಬಿದ್ದ ಯುವಕನ ಕಿರುಕುಳ ತಾಳದೆ ವಿದ್ಯಾರ್ಥಿನಿ ಶುಕ್ರವಾರ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಗರದ ಹೊರವಲಯದ ಚಿತ್ರಾ ಡಾನ್ ಬಾಸ್ಕೋ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಪ್ರೇಮಾ ಮೃತ ಯುವತಿ.
ಎಂದಿನಂತೆ ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿ ಕಾಲೇಜಿನ ಮೂರನೇ ಮಹಡಿಗೆ ಹೋಗಿದ್ದಾಳೆ. ಅಲ್ಲಿಂದ ಕೆಳಗೆ ಜಿಗಿದಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ.
ಆಕೆ ಮೆದೇಹಳ್ಳಿಯವಳಾಗಿದ್ದು, ಬ್ಯಾಂಕ್ ಕಾಲನಿಯ ತರುಣ್ ಎಂಬ ಯುವಕ ವಾಟ್ಸ್‌ಆ್ಯಪ್‌ನಲ್ಲಿ ಪದೇ ಪದೆ ಮೆಸೇಜ್ ಕಳುಹಿಸುತ್ತಿದ್ದ. ಪ್ರೀತಿಯ ಕುರಿತು ಚರ್ಚಿಸುತ್ತಿದ್ದ್ದ. ಆದರೆ, ಇದಕ್ಕೆ ಆಕೆ ಒಪ್ಪದೆ, ನಿರಾಕರಿಸಿದ್ದಾಳೆ ಎಂಬ ಮಾಹಿತಿ ಇದೆ.
ಬೆಳಗ್ಗೆ ಕಾಲೇಜಿಗೆ ಹೋಗಿರುವುದಾಗಿ ಮಗಳು ಫೋನ್ ಮಾಡಿದ್ದಳು. ಕಾಲೇಜಿನ ಮಹಡಿಯಿಂದ ಧುಮುಕಿರುವುದಾಗಿ ಕಾಲೇಜಿನಿಂದ ಬಂದ ಸಂದೇಶದಿಂದ ಪಾಲಕರು ದಿಗ್ಭ್ರಾಂತರಾಗಿ ಶೋಕದಲ್ಲಿ ಮುಳುಗಿದ್ದರು.
ಪಾಲಕರ ಆರೋಪ: ಗುರುವಾರ ಬೆಳಗ್ಗೆಯೂ ಯುವಕ ಸಂದೇಶ ಕಳುಹಿಸಿದ್ದು, ಪ್ರೀತಿಸುವಂತೆ ಬೆದರಿಸಿ ಚಾಕುವಿನ ಚಿತ್ರ ರವಾನಿಸಿದ್ದ. ಇದರಿಂದ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.
ನನ್ನ ಎರಡನೇ ಪುತ್ರಿ ತುಂಬಾ ಮುಗ್ಧೆ. ಅವಳ ಮೇಲೆ ಪ್ರಾಣವನ್ನೇ ಇಟ್ಟಿದ್ದೆ. ಆತ ನಿತ್ಯ ಸಂದೇಶ ಕಳುಹಿಸಿ ಪೀಡಿಸುತ್ತಿದ್ದ ಎಂದು ಆರೋಪಿಸಿದರು.
ಗುರುವಾರ ಸಂಜೆ ಮೆಸೇಜ್‌ಗಳನ್ನು ತನ್ನ ತಂದೆಗೆ ಪ್ರೇಮಾ ತೋರಿಸಿದ್ದಳು. ನಾನು ಬಂದು ವಿಚಾರಿಸುವುದಾಗಿ ಸುಧಾಕರ್ ಹೇಳಿದ್ದರು. ಲವ್ ಮಾಡುವಂತೆ ಚಾಕು ಚಿತ್ರ ಕಳಿಸಿದ್ದಾನೆ. ಅವೆಲ್ಲವೂ ಮೊಬೈಲ್‌ನ ಸ್ಕ್ರೀನ್ ಶಾಟ್‌ನಲ್ಲಿವೆ ಎಂದು ಮೃತಳ ಚಿಕ್ಕಪ್ಪ ಪ್ರಭುರಾಜ್ ತಿಳಿಸಿದರು.
ನಿಖರ ಕಾರಣ ನನಗೆ ತಿಳಿದಿಲ್ಲ: ಪ್ರೇಮಾ ಬೆಳಗ್ಗೆ 8.45 ಕ್ಕೆ ಕಾಲೇಜಿಗೆ ಬಂದಿದ್ದಳು. ಕೊಠಡಿಯೊಳಗೆ ಕೂತು ತನ್ನ ಸ್ನೇಹಿತೆಯರೊಂದಿಗೆ ಮಾತನಾಡುತ್ತಿದ್ದಳು. ನಂತರ ಕಾಲೇಜಿನ ಮೇಲೆ ಹೋಗಿ ಮಹಡಿಯಿಂದ ಧುಮುಕಿದ್ದಾಳೆ. ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎಂದು ಕಾಲೇಜಿನ ಪ್ರಾಚಾರ್ಯ ಡೆನ್ನಿ ತಿಳಿಸಿದರು. ಘಟನೆಗೆ ನಿಖರ ಕಾರಣ ನಮಗೆ ಗೊತ್ತಿಲ್ಲ. ಅವರ ಪಾಲಕರಿಗೆ ಆ ವಿಚಾರ ತಿಳಿದಿದೆ ಎಂದು ಪ್ರತಿಕ್ರಿಯಿಸಿದರು.
ಘಟನಾ ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ರಘು ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತರುಣ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಯುವಕ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪ್ರೇಮಾಳ ತಂದೆ ಯುವಕನ ವಿರುದ್ಧ ದೂರು ನೀಡಿದ್ದಾರೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.
ಮುಗಿಲು ಮುಟ್ಟಿದ ಪಾಲಕರ ಆಕ್ರಂದನ: ಮಗಳ ಸಾವಿನ ವಿಷಯ ತಿಳಿದ ಪಾಲಕರು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯ ಬಳಿಯೂ ಶೋಕ ಮಡುಗಟ್ಟಿತ್ತು. ಸ್ನೇಹಿತರು ಸೇರಿ ಹಲವರು ಕಂಬನಿ ಸುರಿಸಿದರು.
ವಾಟ್ಸ್‌ಆ್ಯಪ್ ಸಂದೇಶದಲ್ಲೇನಿದೆ?: ನೀನು ಯಾರನ್ನಾದರೂ ಲವ್ ಮಾಡ್ತಾ ಇದ್ದೀಯಾ? ನಾನು ನಿನ್ನ ಬಳಿ ಸ್ವಲ್ಪ ಮಾತನಾಡಬೇಕು, ಫ್ರೀ ಇದ್ದೀಯಾ? ಎಂಬುದಾಗಿ ಯುವಕನಿಂದ ಸಂದೇಶಗಳು ಯುವತಿಗೆ ರವಾನೆಯಾಗಿವೆ. ಇದಕ್ಕೆ ಪ್ರತಿಯಾಗಿ ನಾನು ಯಾರನ್ನೂ ಇಷ್ಟಪಡುತ್ತಿಲ್ಲ. ಕುಟುಂಬ ಮತ್ತು ಸ್ನೇಹಿತರಷ್ಟೇ ಇಷ್ಟ. ಈಗ ನಿನಗೆ ಅರ್ಥವಾಯ್ತಲ್ಲ ಎಂದು ಯುವತಿ ಪ್ರತಿಕ್ರಿಯಿಸಿದ್ದಾಳೆ ಎಂಬ ಮಾಹಿತಿ ಇದೆ.
ಸಾವು ಖಂಡಿಸಿ ಎಬಿವಿಪಿ ಪ್ರತಿಭಟನೆ: ವಿದ್ಯಾರ್ಥಿನಿ ಸಾವು ಖಂಡಿಸಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದರು. ಕಾಲೇಜು ಸಿಬ್ಬಂದಿ ಕಾರ್ಯಕರ್ತರನ್ನು ತಡೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ನಂತರ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸಮಾಧಾನ ಪಡಿಸಿದರು.