ಯಾವುದೇ ರೂಪಕದೊಳಗೆ ಅಡಗಿರುವ ಅರ್ಥವನ್ನು ತತ್ವವಾಗಿ ನಾವು ಪರಿಗಣಿಸಬೇಕು

ಯಾವುದೇ ರೂಪಕದೊಳಗೆ ಅಡಗಿರುವ ಅರ್ಥವನ್ನು ತತ್ವವಾಗಿ ನಾವು ಪರಿಗಣಿಸಬೇಕು
5
Published on

ಯಾವುದೇ ರೂಪಕದೊಳಗೆ ಅಡಗಿರುವ ಅರ್ಥವನ್ನು ತತ್ವವಾಗಿ ನಾವು ಪರಿಗಣಿಸಬೇಕು ಎಂದು ವಿಮರ್ಶಕ ಪ್ರೊ.ರಹಮತ್ ತರೀಕೆರೆ ಹೇಳಿದರು.

ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಸೋಮವಾರ ಕನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್ ರೂಪಕಗಳು ಕುರಿತು ಉಪನ್ಯಾಸ ನೀಡಿದರು.

ಸಿದ್ದಲಿಂಗಯ್ಯ ಅವರ ಕವಿತೆಗಳಲ್ಲಿ ಕಪ್ಪು ಜನರ, ಮೊಟ್ಟ ಮೊದಲ ಮಾತೇ, ಸ್ವಾಭಿಮಾನ ಸಮುದ್ರ, ಮಹಾರಾಷ್ಟ್ರದ ಮಣ್ಣಿನಲಿ, ಮೂಡಿಬಂದ ಗುಡುಗು ಸಿಡಿಲೇ, ಕಪ್ಪುಕ್ಕಿನ ಕೋಳಗಳನು, ಕಡಿದು ಎಸೆದ ವಜ್ರವೇ.. ಹೀಗೆ ಹತ್ತಾರು ರೂಪಕಗಳು ಬರುತ್ತವೆ. ಅವುಗಳನ್ನು ವಿಶ್ಲೇಷಿಸಬೇಕು ಎಂದು ಉದಾಹರಿಸಿದರು.

ಅಂಬೇಡ್ಕರ್ ಕುರಿತ ಕಾವ್ಯಗಳಲ್ಲಿ ಅವರನ್ನು ತಾಯಿ, ಸೈನಿಕ, ಗಾಯಗೊಂಡ ಜಿಂಕೆ, ಸೂರ್ಯ, ಸಿಂಹ ಎಂದೆಲ್ಲ ಹೋಲಿಸಲಾಗುತ್ತದೆ. ಪೊರೆಯುವ ತಾಯಿ ಮಕ್ಕಳನ್ನು ರಕ್ಷಿಸಿಕೊಳ್ಳುವಾಗ ಸೈನಿಕನಂತೆ ಹೋರಾಡುತ್ತಾಳೆ. ಮರಿಗಳನ್ನು ರಕ್ಷಿಸಲು ತಾಯಿ ಕೋಳಿ ಹದ್ದಿನೊಂದಿಗೆ ಬೀಳುವಂತೆ ಎಂದರು.

ಯುದ್ಧದಲ್ಲಿ ಹೋರಾಡುವ ಸೈನಿಕನಿಗೆ ತಾಯಿಯ ಅಂತಃಕರಣವಿಲ್ಲದಿದ್ದರೆ ಬಾಡಿಗೆ ಕೊಲೆಗಡುಕನಾಗುತ್ತಾನೆ. ಅಂಬೇಡ್ಕರ್ ಇಡೀ ದೇಶದ ಜನರನ್ನು ರಕ್ಷಿಸಲು ಹಾಗೂ ಅವರ ಹಕ್ಕುಗಳಿಗಾಗಿ ಯುದ್ಧದಲ್ಲಿ ಸೈನಿಕನಂತೆ ಹೋರಾಡಿದಂತೆಯೇ, ತಾಯಿಯಂತೆ ಜನರನ್ನು ಪೊರೆದರು. ದುಂಡು ಮೇಜಿನ ಸಭೆಗಳಲ್ಲಿ ಅವರ ಪ್ರತಿಪಾದನೆಗಳಲ್ಲಿ ಸಿಂಹದಂಥ ಕೋಪವಿತ್ತು ಎಂದು ಹೇಳಿದರು.

ಕೋಪವಿಲ್ಲದಿದ್ದರೆ ಪ್ರೀತಿಗೆ ಅರ್ಥವೇ ಇರುವುದಿಲ್ಲ. ಕೆಡುಕು, ತಪ್ಪು, ಅನ್ಯಾಯಗಳನ್ನು ವಿರೋಧಿಸುವ ಕೋಪ ಇರಬೇಕು. ದೇಶದವನ್ನು ಪ್ರೀತಿಸಿದ ಅಂಬೇಡ್ಕರ್ ಅಂಥ ವ್ಯಕ್ತಿತ್ವಕ್ಕೆ ಪ್ರೀತಿಯಷ್ಟೇ ಕೋಪವೂ ಇತ್ತು. ಜಗತ್ತಿನ ಯಾವುದೇ ಹೋರಾಟಗಾರನಿಗೆ ತಾಯ್ತನವಿದೆ. ದಿಟ್ಟವಾಗಿ ಹೋರಾಡುವ ಗುಣವಿದೆ. ಅಂಬೇಡ್ಕರ್ ಅವರನ್ನು ಇಂದು ಬಹು ಮಾದರಿಯಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಅನುಸಂಧಾನ ನಡೆಯುತ್ತಿದೆ. ಅವರು ಆಕಾಶದ ಅಗಲ ನಿಂತ ಆಲದಂತೆ ಜ್ಞಾನ ವಿಸ್ತಾರವಾಗಿದೆ ಎಂದರು.

ಹೊಸಕಾಲದ ಸಂಶೋಧನಾ ವಿದ್ಯಾರ್ಥಿಗಳ ಸಾಮಾನ್ಯ ಸಮಸ್ಯೆಯೆಂದರೆ ಸಾಹಿತ್ಯವನ್ನು ವಿಮರ್ಶಿಸುವಾಗ ಸಾರಾಂಶವನ್ನಷ್ಟೇ ಬರೆಯುತ್ತಿದ್ದಾರೆ. ಆದರೆ, ವಿಶ್ಲೇಷಣೆ, ವ್ಯಾಖ್ಯಾನಗಳನ್ನು ಬರೆಯುತ್ತಿಲ್ಲ. ಪ್ರಾಯೋಗಿಕ ವಿಮರ್ಶಾ ಪರಿಕರಗಳೇ ಅವರಲ್ಲಿ ಇಲ್ಲವಾಗಿವೆ ಎಂದರು. ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಪ್ರೊ.ಎಸ್.ನರೇಂದ್ರ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net