

ಶ್ರೀಧರ ಅಣಲಗಾರ ಯಲ್ಲಾಪುರ
ಇಲ್ಲಿನ ಪಟ್ಟಣ ಪಂಚಾಯಿತಿಗೆ ಅಂತೂ ಎರಡು ವರ್ಷಗಳ ನಂತರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ ಕೂಡಿ ಬಂದಿದ್ದು, ನ.6 ರಂದು ಚುನಾವಣೆ ನಡೆಯಲಿದೆ. ಎರಡೂ ಸ್ಥಾನಗಳಿಗೆ ಸಾಮಾನ್ಯ ಮೀಸಲಾತಿ ಬಂದಿರುವುದರಿಂದ ಹೆಚ್ಚಿನ ಆಕಾಂಕ್ಷಿಗಳಿರುವುದು ಬಿಜೆಪಿಯ ಪ್ರಮುಖರಿಗೆ ತಲೆನೋವಾಗಿದೆ.
19 ಸದಸ್ಯರನ್ನು ಹೊಂದಿರುವ ಪ.ಪಂನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ 12, ಬಿಜೆಪಿಯ 5, ಜೆಡಿಎಸ್ನಿಂದ 1, ಪಕ್ಷೇತರರಾಗಿ ಒಬ್ಬರು ಆಯ್ಕೆಗೊಂಡಿದ್ದರು. ಕಾಂಗ್ರೆಸ್ನಿಂದ ಆಯ್ಕೆಗೊಂಡ 9 ಸದಸ್ಯರು ಸಚಿವ ಶಿವರಾಮ ಹೆಬ್ಬಾರರ ಬೆಂಬಲಿಗರಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಬಿಜೆಪಿಯ ಸದಸ್ಯ ಬಲ 14 ಆಗುವುದರಿಂದ ಬಿಜೆಪಿ ಆಡಳಿತದ ಗದ್ದುಗೆ ಏರುವುದು ನಿಶ್ಚಿತಗೊಂಡಿದೆ.
ಐದು ಸದಸ್ಯರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಮೂಲ ಹಾಗೂ ವಲಸಿಗ ಎಂಬ ಅಂಶ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಮಹತ್ವದ ಅಂಶವಾಗಲಿದೆ. ಮಂಜುನಾಥನಗರದ ಸದಸ್ಯ ಸತೀಶ ನಾಯ್ಕ, ರವೀಂದ್ರನಗರದ ಸದಸ್ಯ ಸೋಮೇಶ್ವರ ನಾಯ್ಕ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರೂ ಸಚಿವ ಹೆಬ್ಬಾರ ಆಪ್ತರೇ ಆಗಿದ್ದು, ಸತೀಶ ನಾಯ್ಕ ಹೆಬ್ಬಾರ ಬಂದ ನಂತರ ಬಿಜೆಪಿ ಜತೆ ಗುರುತಿಸಿಕೊಂಡರೆ, ಸೋಮೇಶ್ವರ ನಾಯ್ಕ ಮೂಲ ಬಿಜೆಪಿಗ. 3 ಅವಧಿಗಳ ಕಾಲ ಪ.ಪಂ ಆಡಳಿತದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಪುಷ್ಪಾ ನಾಯ್ಕ ಹೆಸರು ಸಹ ಮುಂಚೂಣಿಯಲ್ಲಿದೆ. ಆದರೆ, ಮೂಲ ಬಿಜೆಪಿಗರಾದ ಶ್ಯಾಮಿಲಿ ಪಾಟಣಕರ ಅಧ್ಯಕ್ಷ ಹುದ್ದೆಗೆ ತೀವೃ ಪೈಪೋಟಿ ನಡೆಸುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ. ಸುನಂದಾ ದಾಸ ಅವರೇ ಅಧ್ಯಕ್ಷರಾಗಬೇಕೆಂದು ಪ.ಪಂ ಮಾಜಿ ಅಧ್ಯಕ್ಷರ ಬಳಗವೊಂದು ಸಚಿವರ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಈ ಮೇಲಿನ ಎಲ್ಲರೂ ಆಕಾಂಕ್ಷಿಗಳಾಗಿದ್ದು, ಜತೆಗೆ ಯುವ ಸದಸ್ಯ ಆದಿತ್ಯ ಗುಡಿಗಾರ ಹೆಸರೂ ಕೇಳಿ ಬರುತ್ತಿದೆ.
ಆಯ್ಕೆಯಾದವರಲ್ಲಿ 2/3 ರಷು ಸದಸ್ಯರು ಬಿಜೆಪಿ ಜತೆ ಗುರುತಿಸಿಕೊಂಡಿರುವುದರಿಂದ ವಿಪ್ ಜಾರಿ ಮಾಡುವ ಸಾಹಸಕ್ಕೆ ಕಾಂಗ್ರೆಸ್ ಮುಂದಾಗದಿರಲು ನಿರ್ಧರಿಸಿದೆ. ಒಟ್ಟಿನಲ್ಲಿ ಬಿಜೆಪಿ ಗದ್ದುಗೆ ಏರುವುದಂತೂ ನಿಶ್ಚಿತವಾಗಿದ್ದು, ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಹೇಳಲಾಗುತ್ತಿದ್ದರೂ, ಇದರಲ್ಲಿ ಸಚಿವರ ನಿರ್ಧಾರವೇ ಅಂತಿಮ ಎಂಬುದು ಸ್ಪಷ್ಟ. ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಸಚಿವರ ಆಪ್ತರೇ ಆಗಿರುವುದರಿಂದ, ಅವರು ಯಾರನ್ನು ಆಯ್ಕೆ ಮಾಡಬಹುದೆಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಪಪಂನಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ. ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧ್ಯಕ್ಷರು ಸೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಿದ್ದಾರೆ. ಅವರ ತೀರ್ಮಾನ ಅಂತಿಮ.ಗೋಪಾಲಕೃಷ್ಣ ಗಾಂವ್ಕಾರ, ಬಿಜೆಪಿ ತಾಲೂಕುಅಧ್ಯಕ್ಷ ಪಕ್ಷದಿಂದ ಆಯ್ಕೆಗೊಂಡ 9 ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡದೇ, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ನಾವು ವಿಪ್ ಜಾರಿಗೊಳಿಸಲು ಕಾನೂನಿನಲ್ಲಿ ಅವಕಾಶವಿದ್ದರೂ 2/3 ಬಿಜೆಪಿಗೆ ಹೋಗಿರುವುದರಿಂದ ತಟಸ್ಥವಾಗಿರುತ್ತೇವೆ. ಪಕ್ಷದ ಸದಸ್ಯರು, ಪಕ್ಷೇತರ ಬೆಂಬಲದೊಂದಿಗೆ ವಿಪಕ್ಷದಲ್ಲಿ ಕಾರ್ಯನಿರ್ವಹಿಸುತ್ತೇವೆ. ಡಿ. ಎನ್. ಗಾಂವ್ಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ