

ಶೃಂಗೇರಿ: ಬಹು ಆಯಾಮವನ್ನು ಒಳಗೊಂಡ ಯಕ್ಷಗಾನ ಪಾರಂಪರಿಕ ಮೌಲ್ಯಗಳ ಜತೆ ಮನೋರಂಜನೆಗೆ ಪ್ರಾಮುಖ್ಯತೆ ನೀಡುತ್ತಿರುವ ಅನನ್ಯ ಕಲೆ. ಯಕ್ಷಗಾನ, ಹರಿಕಥೆ, ಪುರಾಣ ಪ್ರವಚನ ಕೇಳುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕಲಾವಿದ ಅನಂತಪದ್ಮನಾಭ ರಾವ್ ಸೀತೂರು ಹೇಳಿದರು.
ಜಿಎಸ್‌ಬಿ ಸಭಾಂಗಣದಲ್ಲಿ ಭಾನುವಾರ ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘ ಹಾಗೂ ರೋಟರಿ ಸಂಸ್ಥೆ ಆಶ್ರಯದಲ್ಲಿ ರಮೇಶ್ ಭಟ್ ಹಳಕ ಸಂಸ್ಮರಣಾರ್ಥ ಆಯೋಜಿಸಿದ್ದ ತಾಳಮದ್ದಲೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕದ ಸಾಂಪ್ರದಾಯಿಕ ಕಲೆಗಳಲ್ಲಿ ಹೆಚ್ಚಿನ ಮಹತ್ವ ಪಡೆದ ಯಕ್ಷಗಾನದ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರತವಾಗಿರಬೇಕು. ಕಲಾವಿದರ ಸೃಜನಶೀಲತೆಗೆ ಪೂರಕವಾದ ವಾತಾವರಣ ನಿರ್ಮಾಣವಾದಾಗ ಮಾತ್ರ ಯಕ್ಷಗಾನ ಕಲೆ ಶಾಶ್ವತವಾಗಿ ತನ್ನ ನೆಲೆಗಟ್ಟನ್ನು ಭದ್ರವಾಗಿಸಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ನಾಗೇಶ್ ಕಾಮತ್ ಮಾತನಾಡಿ, ಪೌರಾಣಿಕ ಪ್ರಸಂಗಗಳಿಗೆ ಆದ್ಯತೆ ನೀಡಿ ಯಕ್ಷಗಾನದ ಮೌಲ್ಯ ಇನ್ನಷ್ಟು ಬೆಳಗಬೇಕು. ಯಕ್ಷಗಾನದಲ್ಲಿ ಸಾಹಿತ್ಯ, ಕಾವ್ಯಗಳ ಆಂತರಿಕ ತಿರುಳಾದ ನವರಸಗಳ ಸಾಕ್ಷಾತ್ಕಾರ ಇದರಲ್ಲಿ ಅಡಗಿದೆ. ವಿಶೇಷ ರೀತಿಯ ವೇಷಭೂಷಣಗಳು, ಭಾವಪೂರ್ಣ ಮಾತುಗಳು ನೋಡುಗರ ಗಮನ ಸೆಳೆಯುತ್ತವೆ. ಮಲೆನಾಡಿನಲ್ಲಿ ಈ ಕಲೆಯನ್ನು ಉಜ್ವಲಗೊಳಿಸಿದ ಕೀರ್ತಿ ಅನಂತಪದ್ಮನಾಭ ರಾವ್ ಅವರಿಗೆ ಸಲ್ಲುತ್ತದೆ. ಸಂಘದ ಚಟುವಟಿಕೆಗೆ ಸದಾ ಬೆನ್ನೆಲುಬಾಗಿ ನಿಂತಿದ್ದ ದಿ. ಹಳಕ ರಮೇಶ್ ಭಟ್, ಶ್ರೀಕಂಠ ಭಟ್ ಅವರ ಮೇರು ವ್ಯಕ್ತಿತ್ವ ನಮಗೆ ಮಾದರಿ ಎಂದರು. ನಿವೃತ್ತ ಶಿಕ್ಷಕ ಸೂರ್ಯನಾರಾಯಣ ಭಟ್, ರೋಟರಿ ಸಂಸ್ಥೆ ಅಧ್ಯಕ್ಷ ಸುಬ್ರಹ್ಮಣ್ಯ ಅಂಬಲಮನೆ, ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗಡೆ ಉಪಸ್ಥಿತರಿದ್ದರು.