ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಬೇಸಿಗೆ ರಜೆ ಮುಗಿದು ಹೊಸ ಶೈಕ್ಷಣಿಕ ವರ್ಷ ಪ್ರಾರಂಭಿಸಲು ಜಿಲ್ಲೆಯ ಶಾಲೆಗಳು ಸಜ್ಜಾಗಿವೆ. ೨೦೨೫ ಮತ್ತು ೨೦೨೬ನೇ ಶೈಕ್ಷಣಿಕ ವರ್ಷದಲ್ಲಿ ಮೇ.೨೯ ರಿಂದ ಜಿಲ್ಲೆಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭವಾಗುತ್ತಿವೆ. ಅಂದು ಮಕ್ಕಳನ್ನು ಸ್ವಾಗತಿಸುವ ಆರಂಭೋತ್ಸವ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಸಿದ್ಧಗೊಂಡಿದ್ದು, ಜೂ.೧ ರಿಂದ ೧೫ರ ಒಳಗೆ ದಾಖಲಾತಿ ಆಂದೋಳನ ಹಮ್ಮಿಕೊಳ್ಳಲಾಗಿದೆ. ಜೂ.೧ ರಿಂದ ೨೦ರ ವರೆಗೆ ಸೇತುಬಂಧ ಕಾರ್ಯಕ್ರಮವನ್ನು ನಡೆಸಲು ಇಲಾಖೆ ಸಿದ್ಧವಾಗಿದೆ. ಇದಕ್ಕಾಗಿ ಇಲಾಖೆಯು ವಿವಿಧ ಅನುಷ್ಠಾನಾಧಿಕಾರಿಗಳಿಂದ ಮಿಂಚಿನ ಸಂಚಾರ ನಡೆಸಲಿದ್ದು, ಶಾಲೆಗಳಿಗೆ ಭೇಟಿ ನೀಡಿ, ಶಾಲೆಯಲ್ಲಿ ಕೈಗೊಂಡಿರುವ ಸಿದ್ಧತೆಗಳು, ಪಠ್ಯ, ಸಮವಸ್ತç ವಿತರಣೆ ಮತ್ತಿತರ ಅಂಶಗಳ ಕುರಿತು ಪರಿಶೀಲನೆ ನಡೆಸುವರು. ಇದರಿಂದ ಶಾಲೆಗಳೊಗಿನ ಸಮಸ್ಯೆಯನ್ನು ಪತ್ತೆ ಹಚ್ಚಿ ಬಗೆಹರಿಸಲು ಅನುಕೂಲವಾಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಮುಖ್ಯಸ್ಥರದ್ದಾಗಿದೆ.
ಪ್ರಸ್ತುತ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಕೇವಲ ೪ ದಿನಗಳು ಮಾತ್ರ ಬಾಕಿ ಇದ್ದು, ಶಿಕ್ಷಣ ಇಲಾಖೆಯಿಂದ ಶೇ.೭೫ ರಷ್ಟು ಪಠ್ಯ ಪುಸ್ತಕಗಳು ಜಿಲ್ಲಾ ಕೇಂದ್ರಕ್ಕೆ ಪೂರೈಕೆಯಾಗಿವೆ. ಇನ್ನುಳಿದ ಪಠ್ಯ ಪುಸ್ತಕಗಳು ಹಾಗೂ ಸಮವಸ್ತçಗಳನ್ನು ಸರ್ಕಾರದಿಂದ ಪೂರೈಕೆ ಆಗಬೇಕಾಗಿದೆ.
ಶಾಲೆಗೆ ಮಕ್ಕಳನ್ನು ಸ್ವಾಗತಿಸುವ ಮೊದಲ ದಿನವೇ ಪುಸ್ತಕ ವಿತರಣೆಗೆ ಶಾಲೆಗಳಲ್ಲಿನ ಶಿಕ್ಷಕರು ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಗೋದಾಮಿನಲ್ಲಿ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದು, ಶಾಲೆಗೆ ವಿತರಣೆ ಮಾಡಲಾಗುತ್ತಿದೆ. ಮಿಕ್ಕ ಉಳಿದ ಪುಸ್ತಕಗಳು ಶಾಲೆಯ ಆರಂಭಕ್ಕೆ ಮುನ್ನ ಬರಲಿವೆ ಎಂಬ ವಿಶ್ವಾಸವನ್ನು ಡಿಡಿಪಿಐ ಕೃಷ್ಣಮೂರ್ತಿ ವ್ಯಕ್ತಪಡಿಸಿದ್ದಾರೆ.
ಲಭ್ಯವಾಗಿರುವ ಪುಸ್ತಕಗಳನ್ನು ಈಗಾಗಲೇ ತಾಲ್ಲೂಕುವಾರು ಗೋದಾಮುಗಳಿಗೆ ಕಳುಹಿಸಿಕೊಡಲಾಗಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪುಸ್ತಕ ವಿತರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
ಬೇಸಿಗೆ ರಜೆ ಮುಗಿದ ಕೆಲವೇ ದಿನಗಳಲ್ಲಿ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಲಿದ್ದಾರೆ. ಇದಕ್ಕಾಗಿ ಪೋಷಕರು ಪುಸ್ತಕದ ಬ್ಯಾಗ್, ಸ್ಟೇಷನರಿ ಸಾಮಗ್ರಿಗಳನ್ನು ಖರೀದಿಸಲು ಸ್ಟೇಷನರಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.
ಮೇ.೨೮ ರಂದು ಶಾಲೆಗಳ ಸ್ವಚ್ಛತೆ :
ಮೇ.೨೮ ರಂದೇ ಶಿಕ್ಷಕರು ಶಾಲೆಗಳಿಗೆ ತೆರಳಿ ಕೊಠಡಿ ಆವರಣಗಳ, ಬಿಸಿಯೂಟ ಕೊಠಡಿ, ಅಡುಗೆ ಪಾತ್ರೆ, ದಾಸ್ತಾನು ಕೊಠಡಿ, ನೀರಿನ ಟ್ಯಾಂಕ್, ಶೌಚಾಲಯಗಳನ್ನು ಸ್ವಚ್ಛತೆ ಮಾಡಿಕೊಂಡು ಶಾಲೆಯನ್ನು ಅಲಂಕರಿಸಿ ಮೇ.೨೯ ರಂದು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ.
ಬಿ.ಇ.ಓ.ಗಳಿಂದ ಸುತ್ತೋಲೆ :
ಈಗಾಗಲೇ ಶಾಲೆಯ ಎಲ್ಲಾ ಮುಖ್ಯಶಿಕ್ಷಕರಿಗೆ ಬಿ.ಇ.ಓ.ಗಳಿಂದ ಸುತ್ತೋಲೆ ಹೊರಡಿಸಿದ್ದು, ಶಾಲೆಯ ಪ್ರಾರಂಭದ ಮೊದಲ ದಿನವೇ ಶಿಕ್ಷಕರು ಹಾಜರಿದ್ದು, ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳಲ್ಲಿನ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು, ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಿ, ಸಭೆಯಲ್ಲಿ ಸಮಸ್ಯೆಗಳನ್ನು ಮುಖ್ಯಶಿಕ್ಷಕರಿಂದ ಪಡೆಯಲಾಗಿದೆ ಎನ್ನಲಾಗಿದೆ.
ಬಾಕ್ಸ್
ಜಿಲ್ಲೆಯಲ್ಲಿ ೨೦೦೦ಕ್ಕೂ ಹೆಚ್ಚು ಅಧಿಕ ವಿದ್ಯಾರ್ಥಿಗಳಿದ್ದಾರೆ. ೧ನೇ ತರಗತಿ ಪ್ರವೇಶಕ್ಕೆ ನೋಂದಣಿ ನಡೆಯುತ್ತಿದೆ. ಒಟ್ಟು ೨೬೫೯ ಶಾಲೆಗಳಿವೆ. ೧೨೦೪ ಕಿರಿಯ ಪ್ರಾಥಮಿಕ ಶಾಲೆಗಳು, ೧೦೩೫ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ೪೨೦ ಪ್ರೌಢಶಾಲೆಗಳು ಇವೆ.
ಕೋಟ್
ಪಠ್ಯ ಪುಸ್ತಕಗಳನ್ನು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತವಾಗಿ ವಿತರಿಸಲಾಗುವುದು. ಮೇ.೨೯ಕ್ಕೆ ಸರ್ಕಾರಿ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಶಾಲೆಯ ಮುಖ್ಯಸ್ಥರು ಲಭ್ಯವಾಗಿರುವ ಪುಸ್ತಕಗಳನ್ನು ಶಾಲೆಗಳಿಗೆ ಸಾಗಿಸುವ ಕೆಲಸ ನಡೆಯುತ್ತಿದೆ. ಮಕ್ಕಳ ಸ್ವಾಗತಕ್ಕೂ ಸಿದ್ಧತೆಗಳು ನಡೆಯುತ್ತಿವೆ.
-ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆ.
ಚಿತ್ರ ೨೫ ಕೆ.ಎಲ್.ಆರ್. ೦೧ : ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆ ಭಾವಚಿತ್ರ
ಚಿತ್ರ ೨೫ ಕೆ.ಎಲ್.ಆರ್. ೦೧ಎ : ಪುಸ್ತಕ ಗೋದಾಮಿನಲ್ಲಿ ಶಿಕ್ಷಕರು ಪುಸ್ತಗಳನ್ನು ಜೋಡಣೆ ಮಾಡಿಕೊಳ್ಳುತ್ತಿರುವ ಸಂಗ್ರಹ ಚಿತ್ರ