

ಬೀರೂರು : ಅಮೃತ ಭಾರತ್ ಯೋಜನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ಮತ್ತು ತರೀಕೆರೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಬೀರೂರು ರೈಲು ನಿಲ್ದಾಣಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶನಿವಾರ ಭೇಟಿ ನೀಡಿ ನಿಲ್ದಾಣ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೀರೂರು ರೈಲು ನಿಲ್ದಾಣದಲ್ಲಿ ್ಲಾಟ್‌ಾರಂ ವಿಸ್ತರಣೆಯ ಬೇಡಿಕೆ, ವಿಐಪಿ ಲಾಂಚ್ ಸ್ಥಾಪನೆಯ ಕೋರಿಕೆ ಇದೆ. ಈ ವಿಷಯವಾಗಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರಧಾನಿ ನಿರ್ದೇಶನದಂತೆ ದೇಶಾದ್ಯಂತ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳನ್ನು ಇನ್ನು ನಾಲ್ಕೈದು ವರ್ಷಗಳಲ್ಲಿ ಸಂಪೂರ್ಣ ಮುಚ್ಚಲಾಗುವುದು. ಅಲ್ಲಿ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗುವುದು ಎಂದರು.
ಈ ಯೋಜನೆಗೆ ರಾಜ್ಯ ಸರ್ಕಾರಗಳು ಹಣ ಭರಿಸುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರವೇ ಭೂಸ್ವಾಧೀನದಿಂದ ಹಿಡಿದು ಯೋಜನೆಯ ಎಲ್ಲ ವೆಚ್ಚಗಳನ್ನು ಭರಿಸಲಿದೆ. ದೇಶದ ರಕ್ಷಣೆಗೆ ರಕ್ಷಣಾ ಪಡೆಗಳಿದ್ದರೆ, ಜನಸಾಮಾನ್ಯರ ಒಳಿತಿಗಾಗಿ ರೈಲ್ವೆ ಇಲಾಖೆ ಕೆಲಸ ಮಾಡುತ್ತಿದ್ದು ಇಲಾಖೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸ್ವಷ್ಪಪಡಿಸಿದರು.
ಬಹುದಿನಗಳ ಬೇಡಿಕೆಯಾದ ಚಿಕ್ಕಮಗಳೂರು-ತಿರುಪತಿ ರೈಲಿಗೆ ಜು.11ರಂದು ಚಾಲನೆ ನೀಡಲಾಗುವುದು. ಕಳೆದ 36 ವರ್ಷಗಳಿಂದ ನನೆಗುದಿಗೆಯಲ್ಲಿದ್ದ 43 ಸಾವಿರ ಕೋಟಿ ರೂ. ವೆಚ್ಚದ 11 ಯೋಜನೆಗಳನ್ನು ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಜು.12ರಂದು ಉದ್ಘಾಟಿಸಲಾಗುವುದು.
ಹತ್ತಾರು ಸಭೆಗಳಲ್ಲಿ ಅಧಿಕಾರಿಗಳೇ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ತಳ್ಳಿಹಾಕಿದ್ದ ಬೆಂಗಳೂರಿನ ರಾಮೋಹಳ್ಳಿ-ಚಲ್ಲಘಟ್ಟ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ಜು.13ಕ್ಕೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಎಲ್ಲ ರಂಗಗಳು ವಿಶೇಷವಾಗಿ ರೈಲ್ವೆ ಇಲಾಖೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾರ್ಗದರ್ಶನದಲ್ಲಿ ಪ್ರಗತಿಯತ್ತ ಸಾಗುತ್ತಿದೆ. ಬೆಂಗಳೂರು ಮಹಾನಗರದ 11 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ನಿಲ್ದಾಣಗಳಿಗೆ ತಲುಪಲು ಇರುವ ಅಡತಡೆಗಳನ್ನು ಪರಿಹರಿಸಲು ಕಳೆದ ವಾರ ಅಧಿಕಾರಿಗಳ ಸಭೆ ನಡೆಸಿ ಸರ್ವೇ ಆರಂಭಿಸುವಂತೆ ಹಾಗೂ ಹಂತ ಹಂತವಾಗಿ ಜಾರಿ ಮಾಡಲು ಮಾಸ್ಟರ್‌ಪ್ಲಾನ್ ತಯಾರಿಸುವಂತೆ ಸೂಚಿಸಲಾಗಿದೆ. ವರದಿಯ ನಂತರ ಪರಿಹಾರಕ್ಕೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.