ಮೂಗೂರು ಬಂಡಿ ಜಾತ್ರೆ ಕಣ್ತುಂಬಿಕೊಂಡ ಜನಸ್ತೋಮ

20230106_161304
Published on

ಮೂಗೂರು: ಹಳೆಯ ಮೈಸೂರು ಭಾಗದಲ್ಲಿ ಪ್ರಖ್ಯಾತಿ ಪಡೆದ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸದ ಅಂಗವಾಗಿ ಮೂಗೂರು ಬಂಡಿ ಜಾತ್ರೆ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


ಜಾನುವಾರುಗಳ ರೋಗ ರುಜಿನಗಳ ನಡುವೆ ರೈತರು ಬಂಡಿ ಓಟಕ್ಕಾಗಿಯೇ ಲಕ್ಷಾಂತರ ರೂ. ಬೆಲೆ ಬಾಳುವ ಎತ್ತುಗಳನ್ನು ಖರೀದಿಸಿ ಸಿಂಗಾರ ಮಾಡಿದ್ದರು. ಮೂಗೂರು ಬಂಡಿ ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ನಡೆದು, ಬೆಳಗ್ಗೆ 11.45ಕ್ಕೆ ಅಮ್ಮನವರ ಉತ್ಸವ ಮೂರ್ತಿ ದೇಗುಲದಲ್ಲಿ ಪ್ರದಕ್ಷಿಣೆ ಹಾಕಿ, ನಂತರ ರುದ್ರಾಕ್ಷಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಹರಕೆ ಹೊತ್ತ ಭಕ್ತರು ಬಂಡಿಗೆ ಈಡುಗಾಯಿ ಸುರಿಮಳೆಗೈದ ನಂತರ ರುದ್ರಾಕ್ಷಿ ಮಂಟಪದ ಉತ್ಸವದೊಂದಿಗೆ ಬಂಡಿ ಮಂಟಪಕ್ಕೆ ತಲುಪುತ್ತಿದ್ದಂತೆ, ಅಮ್ಮನವರಿಗೆ ಪೂಜೆ ಸಲ್ಲಿಸಿ, ಭಕ್ತರ ಸಿಳ್ಳೆ ಚಪ್ಪಾಳೆ ಜೈಂಕಾರದೊಂದಿಗೆ ಬಂಡಿ ಓಟಕ್ಕೆ ಚಾಲನೆ ನೀಡಲಾಯಿತು. ಬಂಡಿ ಓಟದ ವೀಕ್ಷಣೆಗಾಗಿ ಜನಸ್ತೋಮವೇ ನೆರೆದಿತ್ತು.


ಅನ್ನ ಸಂತರ್ಪಣೆ: ಕಳೆದ 38 ವರ್ಷಗಳಿಂದಲೂ ಮಂಡ್ಯ ಜಿಲ್ಲೆಯ ಮದ್ದೂರಿನ ಬ್ಯಾಡರಹಳ್ಳಿ ಗ್ರಾಮಸ್ಥರು ಹಾಗೂ ಅಮ್ಮನವರ ಸೇವಾ ಸಮಿತಿ ವತಿಯಿಂದ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ನಡೆಸಿಕೊಂಡು ಬರಲಾಗುತ್ತಿದೆ. ಅದರಂತ ಈ ಬಾರಿಯೂ ಜ.10ರವರೆಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಆಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net