ಮುಷ್ಕರ ಕೈಬಿಟ್ಟ ಆರೋಗ್ಯ ಸಿಬ್ಬಂದಿ: ಗುರುವಾರದಿಂದ ಕರ್ತವ್ಯಕ್ಕೆ ಹಾಜರ್

Health workers
Published on

ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ನಾನಾ ಬೇಡಿಕೆಗಳನ್ನು ಇನ್ನೊಂದು ತಿಂಗಳಲ್ಲಿ ಈಡೇರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿ ಮುಷ್ಕರ ಕೈಬಿಟ್ಟಿದ್ದಾರೆ.

ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದಡಿ ಕಾರ್ಯನಿರ್ವಹಿಸುತ್ತಿರುವ 30 ಸಾವಿರಕ್ಕೂ ಹೆಚ್ಚು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರರು ಕಳೆದ 14 ದಿನಗಳಿಂದ ಕರ್ತವ್ಯ ಬಹಿಷ್ಕರಿಸಿ, ಮುಷ್ಕರ ನಡೆಸಿದ್ದರು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಮುಖ್ಯಸ್ಥರ ಜತೆಗೆ ಮಂಗಳವಾರ ಸಭೆ ನಡೆಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.ಈ ಕುರಿತು ಸಂಘದ ಪ್ರಮುಖರು ಆರೋಗ್ಯ ಸಿಬ್ಬಂದಿಯ ಜತೆಗೆ ಬುಧವಾರ ಚರ್ಚೆ ನಡೆಸಿ, ಮುಷ್ಕರದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದು, ಗುರುವಾರದಿಂದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ನನ್ನ ಮನವಿಗೆ ಸ್ಪಂದಿಸಿ, ಕರ್ತವ್ಯಕ್ಕೆ ಮರಳಲು ಒಪ್ಪಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರ ಈ ನಡೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ವೇತನ ಪರಿಷ್ಕರಣೆ, ಸೇವಾ ಭದ್ರತೆ, ಮೃತರ ಕುಟುಂಬಕ್ಕೆ ಪರಿಹಾರ, ನಿಗದಿತ ಅವಧಿಗೆ ವೇತನ, ರಜೆಗಳ ಹೆಚ್ಚಳ, ವರ್ಗಾವಣೆ ರದ್ಧತಿ, ಅಪಘಾತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಂದು ತಿಂಗಳಲ್ಲಿ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.ಈ ಅವಧಿಯಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಮುಷ್ಕರ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಯಮೋಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net