

ನಗರದ ಉದಯಗಿರಿಯಲ್ಲಿ ಇತ್ತೀಚೆಗೆ ನಡೆದ ಕಲ್ಲುತೂರಾಟ ಪ್ರಕರಣಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ನೆರವಾಗಲು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಜಾಕ್ ಮುಂದೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಮೈಸೂರಿಗೆ ಆಗಮಿಸಿದ ರಜಾಕ್, ಅವರಿಗೆ ಬೇಲ್ ಕೊಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಲೀಸರ ಮೇಲೆ ಯಾರೇ ಹಲ್ಲೆ ಮಾಡಿದ್ದರೂ ತಪ್ಪೇ, ಇದಕ್ಕಾಗಿ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ ಎಂದರು.
ಈ ಪ್ರಕರಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಇದರಲ್ಲಿ ಸಣ್ಣ ಪುಟ್ಟ ಹುಡುಗರು, ಅಮಾಯಕರು ಇದ್ದಾರೆ. ಇವರನ್ನು ಬಿಡಿಸುವ ಸಲುವಾಗಿ ವಕೀಲರನ್ನು ನೇಮಕ ಮಾಡಲು ಬಂದಿದ್ದೇನೆ ಎಂದರು.
ಉದಯಗಿರಿಯಲ್ಲಿ ಮುಂದೆ ಒಂದು ಶಾಂತಿ ಸಭೆ ಮಾಡೋಣ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದ ರೀತಿಯಲ್ಲಿ ನೋಡಿಕೊಳ್ಳೋಣ ಎಂದ ಅವರು, ಪ್ರವಾದಿಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾರಿಗೆ ಆದರೂ ಕೋಪ ಬರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಸೆಕ್ಯೂಲರ್ ಪಕ್ಷ. ಸಿದ್ದರಾಮಯ್ಯ ಅಂದರೆ ಒಂದು ರೀತಿ ಪ್ರೀತಿ ಜಾಸ್ತಿ ಅಷ್ಟೇ. ಹಾಗಂತ ನಾನಿಲ್ಲಿ ಯಾವುದೇ ಪಕ್ಷದ ಪರವಾಗಿ ಬಂದಿಲ್ಲ. ನಾನು ಯಾವುದೇ ಪಕ್ಷದ ವಕ್ತಾರನಲ್ಲ. ಉದಯಗಿರಿ ಘಟನೆಯಲ್ಲಿ ಬಂಧನಕ್ಕೆ ಒಳಗಾಗಿರುವವರಲ್ಲಿ ಕೆಲವು ಅಮಾಯಕರು, ಸಣ್ಣ ವಯಸ್ಸಿನ ಹುಡುಗರು ಇದ್ದಾರೆ. ಅಂತಹವರ ಪರವಾಗಿ ನಾನು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.