ಮೀಸಲು ಕಡಿತಕ್ಕೆ ಅಸಮಾಧಾನ; ಸಿಎಂಗೆ ಪತ್ರ

Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬೇರೆ ರಾಜ್ಯಗಳಲ್ಲಿನ ರಾಷ್ಟ್ರೀಯ ಸ್ವಾಮ್ಯದ ಲಾ ಸ್ಕೂಲ್‌ಗಳು, ವಿದ್ಯಾಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಇರುವಾಗ ಕರ್ನಾಟಕದಲ್ಲಿ ಅವಕಾಶ ನೀಡದೆ ಇರುವುದರ ಬಗ್ಗೆ ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ದನಿ ಎತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಕನ್ನಡಿಗರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಆ್ ಇಂಡಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾಯಕೋತ್ತರ ಪದವಿಯ 160 ಸೀಟುಗಳಲ್ಲಿ ಕಳೆದ ವರ್ಷ ರಾಜ್ಯ 8 ಮಂದಿಗಷ್ಟೇ ಪ್ರವೇಶಾವಕಾಶ ಸಿಕ್ಕಿದೆ. ಎಲ್ಲಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25 ಸೀಟುಗಳು ಆಯಾ ರಾಜ್ಯದವರಿಗೆ ಸಿಗಬೇಕೆಂಬುದು ನ್ಯಾಯ ಸಮ್ಮತ ಬೇಡಿಕೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯದ ಸಂಪನ್ಮೂಲ, ಭೂಮಿ, ಸವಲತ್ತು, ಸಬ್ಸಿಡಿ, ಸರ್ಕಾರದ ಪ್ರೋತ್ಸಾಹ ಪಡೆದುಕೊಳ್ಳುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯಗಳ ನಿಯಂತ್ರಣ ಇಲ್ಲ ಎನ್ನುವುದು ಎಷ್ಟು ಸರಿ. ಹೀಗಾಗಿ ಮುಖ್ಯಮಂತ್ರಿಯವರು ಕೂಡಲೇ ತಜ್ಞರ ಸಮಿತಿ ರಚಿಸಿ, ಅಗತ್ಯ ಕ್ರಮಕೈಗೊಳ್ಳಬೇಕು. ಈ ಮೂಲಕ ರಾಜ್ಯದ ವಿದ್ಯಾರ್ಥಿಗಳ ಪರ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net