ಮಾವಿನ ಫಸಲಿನ ಗುಣಮಟ್ಟ ಕಾಪಾಡಿಕೊಳ್ಳಲು ಮಾವಿನ ಕಾಯಿಗೆ ರಕ್ಷಣಾ ಕವಚದ ಪೇಪರ್ ಕವರ್‌ಗಳನ್ನು ಕಟ್ಟಲು ಮುಂದಾಗಿರುವ ರೈತರು / ಊಜಿ ಮತ್ತು ಕೀಟಭಾದೆಯಿಂದ ರಕ್ಷಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಮಾವಿನ ಫಸಲಿನ ಗುಣಮಟ್ಟ ಕಾಪಾಡಿಕೊಳ್ಳಲು ಮತ್ತು ಇಳುವರಿಯನ್ನು ಹೆಚ್ಚಿಸಿಕೊಳ್ಳಲು ರೈತರು ಮಾವಿನಕಾಯಿಗೆ ಊಜಿ ಸೇರಿದಂತೆ ಕೀಟಭಾದೆಯಿಂದ ರಕ್ಷಿಸಲು ರಕ್ಷಣಾ ಕವಚಗಳನ್ನು ಕಾಯಿಗೆ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಮಾವು ಮತ್ತು ಟೊಮೆಟೋ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಟೊಮೆಟೋಗೆ ಕೀಟಭಾದೆ ತಗುಲುವಂತೆ ಮಾವಿಗೂ ಕೀಟಭಾದೆಗಳ ಕಾಟ ಹೆಚ್ಚಾಗುತ್ತಿವೆ. ಇದರಿಂದ ಔಷಧಿ ಸಿಂಪಡಣೆ ಮಾಡಿದರು ಕಾಯಿಗಾತ್ರ ಹೆಚ್ಚಾಗುತ್ತಿದ್ದಂತೆ ಕಾಯಿ ಮೇಲೆ ಊಜಿ ಸೇರಿದಂತೆ ಇತರೆ ಕೀಟಗಳು ದಾಳಿ ಮಾಡಿ ಗಾಯಗೊಳಿಸುತ್ತವೆ.

ಗಾಯವಾದ ಕಾಯಿ ದಿನೇ ದಿನೇ ಹಳದಿ ಬಣ್ಣಕ್ಕೆ ಬಂದು ಋತುವಿಗೆ ಬರುವ ಸಂದರ್ಭದಲ್ಲಿ ಉದುರಿ ಬೀಳುತ್ತವೆ. ಹೂವಿನಿಂದ ಕಾಯಿ ಕಚ್ಚಿದ ನಂತರ ೧೨೦ ದಿನಗಳಲ್ಲಿ ಕಾಯಿ ಋತುವಿಗೆ ಬರುತ್ತದೆ. ಕಾಯಿ ಮೇಲೆ ಯಾವುದೇ ಕೀಟಭಾದೆ ಮತ್ತು ಊಜಿ ಬೀಳದಂತೆ ರಕ್ಷಣಾ ಕವಚವನ್ನು ಹೊದಿಕೆ ಮಾಡಿದರೆ ೧೨೦ ದಿನಗಳ ಬದಲಾಗಿ ೧೩೦ ದಿನಗಳಿಗೆ ಋತುವಿಗೆ ಬರುತ್ತದೆ. ಕಾಯಿಯ ಗಾತ್ರವೂ ಹೆಚ್ಚಾಗುತ್ತದೆ. ಹಾಗೂ ಯಾವುದೇ ಕೀಟಭಾದೆಗಳು ಮತ್ತು ಕಾಯಿಯ ಮೇಲೆ ಗಾಯ ಆಗದಂತೆ ಜೋಪಾನವಾಗಿ ನೋಡಿಕೊಂಡರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತದೆ.

ಕಾಯಿಯನ್ನು ಕಾಪಾಡಿಕೊಳ್ಳಲು ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ಪೇಪರ್ ಕವರ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಪೇಪರ್ ಕವರ್ ಬೆಲೆ ೧.೬೦ ಪೈಸೆಯಿಂದ ೧.೮೦ ಪೈಸೆ ತನಕ ತೋಟಗಾರಿಕೆ ಇಲಾಖೆಯಿಂದ ೧.೨೫ ಪೈಸೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಮಾವಿನಕಾಯಿ ೧.೫ ಗ್ರಾಮ್ ಗಾತ್ರ ಆದ ನಂತರ ಪ್ರತಿ ಕಾಯಿಗೆ ಪೇಪರ್ ಕವರ್‌ನ್ನು ಕವಚವಾಗಿ ಕಟ್ಟುವುದರಿಂದ ಕಾಯಿ ದೊಡ್ಡದಾಗಿ ಋತುವಿಗೆ ಬರುವ ತನಕ ಮಚ್ಚೆ ಸೇರಿದಂತೆ ಯಾವುದೇ ಗಾಯ, ಊಜಿ ಮತ್ತು ಕೀಟಭಾದೆ ಇಲ್ಲದಂತೆ ಪೇಪರ್ ಕವರ್ ರಕ್ಷಣೆ ಮಾಡುತ್ತದೆ. ಹಾಗೂ ಔಷಧಿ ಸಿಂಪಡಣೆ ಮಾಡುವ ಅಗತ್ಯವೇ ಇರುವುದಿಲ್ಲ. ನೈಸರ್ಗಿಕವಾಗಿಯೇ ಹಣ್ಣು ಆಗುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತಿದೆ.

ತೋರಾಪುರಿ ಹೊರತುಪಡಿಸಿ ಉಳಿದಂತೆ ದಸೇರಿ, ಮಲಗೂಬ, ಮಲ್ಲಿಕ, ಬಾದಾಮಿ, ರಸಪುರಿ, ರಾಜಗಿರ, ಬೇನಿಷ ಮುಂತಾದ ತಳಿಗಳ ಕಾಯಿಗಳಿಗೆ ಈ ರಕ್ಷಣಾ ಕವಚವನ್ನು ಬಳಸುವುದರಿಂದ ಉತ್ತಮ ಇಳುವರಿಯ ಜೊತೆಗೆ ಗುಣಮಟ್ಟವನ್ನು ಕಾಪಾಡಬಹುದಾಗಿದೆ. ತೋತಾಪುರಿ ಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಎಲ್ಲಾ ಕಾಯಿಗಳಿಗೂ ಪೇಪರ್ ಕವರ್ ಕಟ್ಟಲು ಸಾಧ್ಯವಿಲ್ಲ ಎಂದು ರೈತರು ತಿನ್ನಲು ಮಾರುಕಟ್ಟೆಗೆ ಸಿಗುವಂತಹ ಕಾಯಿಗಳಿಗೆ ಮಾತ್ರ ಪೇಪರ್ ಕವರ್‌ನ್ನು ಕಟ್ಟಲು ಈಗಾಗಲೇ ಕೆಲವು ರೈತರು ಮುಂದಾಗಿದ್ದಾರೆ.

ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಪ್ರಕೃತಿ ವಿಕೋಪದಿಂದ ಉಷ್ಣಾಂಶದಲ್ಲಿನ ಏರುಪೇರಿನಿಂದಾಗಿ ಬಿಟ್ಟ ಹೂವೆಲ್ಲ ಕಾಯಿ ಕಚ್ಚಲಿಲ್ಲ. ನುಸಿರೋಗ ಮತ್ತು ಕೀಟಭಾದೆಯಿಂದ ಗೋಲಿಗಾತ್ರದ ಪಿಂದೆಗಳು ಉದುರುತ್ತಿದ್ದ ಕಾರಣ ಫಸಲು ಕಡಿಮೆಯಾಗಿದೆ. ಇರುವ ಫಸಲನ್ನು ಕಾಪಾಡಿಕೊಳ್ಳಲು ರೈತರು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಕೋಟ್

ಈ ವರ್ಷ ಫಸಲು ಕಡಿಮೆಯಿರುವ ಕಾರಣ ಇರುವ ಫಸಲನ್ನು ಕಾಪಾಡಿಕೊಳ್ಳಲು ತಿನ್ನಲು ರುಚಿಕರವಾಗಿರುವಂತಹ ವಿವಿಧ ಜಾತಿಯ ಮಾವಿನ ಕಾಯಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪೇಪರ್ ಕವರ್‌ನ್ನು ಬಳಸುವುದು ಸೂಕ್ತ. ರಿಯಾಯಿತಿ ದರದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಿಗುತ್ತವೆ. ಕಾಯಿ ರಕ್ಷಣಾ ಕವಚ ಇದ್ದಂತೆ. ಸಣ್ಣ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದರೆ ರಕ್ಷಣೆ ಇರುತ್ತದೆ. ಮುಖ್ಯವಾಗಿ ಊಜಿ ಕಾಟ ಇರುವುದಿಲ್ಲ. ಕೀಟಭಾಧೆಯಿಂದ ರಕ್ಷಣೆ ಮಾಡಬಹುದು. ಪೇಪರ್ ಕವರ್ ಬಳಸಿದ ಕಾಯಿ ಗಾತ್ರವು ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತದೆ. ರೈತರು ಇದನ್ನು ಬಳಸುವುದು ಸೂಕ್ತ.

-ರಾಜಾರೆಡ್ಡಿ, ಮಾವು ಬೆಳೆಗಾರರು.

ಚಿತ್ರ ೧೮ ಕೆ.ಎಲ್.ಆರ್. ೦೨ : ಮಾವಿನಕಾಯಿಗಳಿಗೆ ರೋಗ ರುಜಿನಗಳು ಬರದಂತೆ ರಕ್ಷಣೆ ಕವಚವಾಗಿ ಪೇಪರ್ ಕವರ್‌ಗಳನ್ನು ರೈತರು ಕಾಯಿಗಳಿಗೆ ಕಟ್ಟಿರುದು.

ಚಿತ್ರ ೧೮ ಕೆ.ಎಲ್.ಆರ್. ೦೨ಎ : ರಾಜಾರೆಡ್ಡಿ, ಮಾವು ಬೆಳೆಗಾರರು ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net