ವಿಜಯವಾಣಿ ಸುದ್ದಿಜಾಲ ಕೋಲಾರ
ಮಾಲೂರು ವಿಧಾನಸಭಾ ಕ್ಷೇತ್ರದ ಮರುಮತ ಎಣಿಕೆ ಮಂಗಳವಾರ ಜಿಲ್ಲಾ ಚುನಾವಣಾ ಅಧಿಕಾರಿ ನಿಗಧಿಪಡಿಸಿರುವುದರಿಂದ ಎಲ್ಲರ ಚಿತ್ತ ಈಗ ಮಾಲೂರು ವಿಧಾನಸಭಾ ಕ್ಷೇತ್ರದ ಕಡೆಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಪರಾಭವ ಅಭ್ಯರ್ಥಿ ಮರು ಮತ ಎಣಿಕೆಯ ಬಗ್ಗೆ ಕೋರ್ಟ್ ಮೆಟ್ಟಿಲೇರಿದ ಕಾರಣ ನ್ಯಾಯಾಲಯದ ಆದೇಶದಂತೆ ಮರು ಮತ ಎಣಿಕೆಯನ್ನು ಮಂಗಳವಾರ ಕೋಲಾರದ ತೋಟಗಾರಿಕೆ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಎರಡೂವರೆ ವರ್ಷಗಳ ನಂತರ ಕೋರ್ಟು ಮರುಮತ ಎಣಿಕೆಗೆ ಆದೇಶ ನೀಡಿದೆ. ೨೦೨೩ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಕೆ.ವೈ.ನಂಜೇಗೌಡ ಶಾಸಕರಾಗಿ ಎರಡೂವರೆ ವರ್ಷ ಅವಧಿ ಪೂರೈಸಿರುವ ನಂತರ ಈಗ ಮರುಮತ ಎಣಿಕೆಗೆ ಆದೇಶ ಮಾಡಿದ್ದು, ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿ ಇರುವ ಕಾರಣ ಶಾಸಕರಾಗಿ ಆಯ್ಕೆ ಆಗಿರುವ ಕೆ.ವೈ.ನಂಜೇಗೌಡ ಕಾಂಗ್ರೇಸ್ ಪಕ್ಷದವರೇ ಆಗಿರುವುದರಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಹಂತದಲ್ಲಿ ಮರುಮತ ಎಣಿಕೆ ಮಂಗಳವಾರ ನಡೆಯಲಿರುವುದರಿಂದ ಕ್ಷೇತ್ರದ ಮತದಾರರಲ್ಲಿ ಆಸೆ ಮತ್ತು ನಿರಾಸೆಗಳು ಮೂಡುವಂತೆ ಆಗಿವೆ.
ನ್ಯಾಯಾಲಯದ ಮಟ್ಟಿಲೇರಿರುವ ಪರಾಭವ ಅಭ್ಯರ್ಥಿ ಕೆ.ಎಸ್.ಮಂಜುನಾಥ್‌ಗೌಡ ಅವರ ಅಭಿಮಾನಿಗಳು ಮರುಮತ ಎಣಿಕೆಯಲ್ಲಿ ನ್ಯಾಯ ಸಿಗುತ್ತದೆ ಎಂಬ ಭರವಸೆಯಲ್ಲಿ ಇದ್ದಾರೆ. ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರ ಅಭಿಮಾನಿಗಳು ಮರುಮತ ಎಣಿಕೆ ಆದರೂ ನಮ್ಮ ಶಾಸಕರೇ ಗೆಲುವು ಸಾಧಿಸಲಿದ್ದಾರೆ. ಮತ್ತೆ ಎರಡೂವರೆ ವರ್ಷಗಳ ಕಾಲ ಶಾಸಕರಾಗಿ ಮುಂದುವರೆಯಲಿದ್ದಾರೆ ಎನ್ನುತ್ತಿದ್ದಾರೆ.
ಈ ಬಗ್ಗೆ ಹಾಲಿ ಹಾಗೂ ಮಾಜಿ ಶಾಸಕರಿಬ್ಬರೂ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಮರುಮತ ಎಣಿಕೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಮಾಜಿ ಶಾಸಕರು ಈಗಾಗಲೇ ಜಿಲ್ಲಾಧಿಕಾರಿಗಳನ್ನು ಒತ್ತಾಯಪಡಿಸಿದ್ದಾರೆ. ಮರುಮತ ಎಣಿಕೆಯಲ್ಲಿ ನ್ಯಾಯ ದೊರೆತರೂ ಎರಡೂವರೆ ವರ್ಷಗಳ ನಷ್ಟದ ಬಗ್ಗೆ ಮತ್ತೆ ಕೋರ್ಟು ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಅವರ ಅಭಿಮಾನಿಗಳು ಹೇಳತೊಡಗಿದ್ದಾರೆ.