ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯ ಸರ್ಕಾರ ಕಾರ್ಮಿಕರ ಮಕ್ಕಳಿಗಾಗಿ ೧೧ ವಸತಿ ಶಾಲೆಗಳನ್ನು ೪೦೫ ಕೋಟಿ ೫೫ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದ್ದು, ಇದರ ಭಾಗವಾಗಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ೩೬ ಕೋಟಿ ೨೫ ಲಕ್ಷ ರೂ.ಗಳ ವೆಚ್ಚದಲ್ಲಿ ಕಾರ್ಮಿಕ ವಸತಿ ಶಾಲೆಯನ್ನು ನಿರ್ಮಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಈ ವಿಷಯವನ್ನು ತಿಳಿಸಿದ ನಂಜೇಗೌಡ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರು ಅಭಿನಂದನೆಯನ್ನು ತಿಳಿಸಿದ್ದು, ಕೋಲಾರಕ್ಕೆ ಕಾರ್ಮಿಕ ಸಚಿವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಲೂರಿನಲ್ಲಿ ಕಾರ್ಮಿಕ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದೆ. ಜಾಗ ನೀಡಿ ಎಂದು ಸಚಿವರು ತಿಳಿಸಿದ್ದರು.
ಮಾಲೂರು ತಾಲ್ಲೂಕು ಕೆ.ಜಿ.ಹಳ್ಳಿ ಸರ್ವೇ ನಂ.೭೩ ರಲ್ಲಿ ೩೮ ಎಕೆರೆ ಜಾಗವನ್ನು ಗುರ್ತಿಸಲಾಗಿದೆ. ಸದರಿ ಜಾಗದಲ್ಲಿ ಐಟಿಐ ಕಾಲೇಜು, ನಾಡಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಛೇರಿಗಳು ತಲೆ ಎತ್ತಿವೆ. ಸದರಿ ಜಾಗದಲ್ಲಿ ಉಳಿಕೆ ಜಮೀನು ಇದ್ದು, ಆ ಜಾಗವನ್ನು ಕಾರ್ಮಿಕ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕೆ ನೀಡಲಾಗುವುದು ಎಂದರು.
ಇದು ನನ್ನ ತಾಲ್ಲೂಕಿನ ಜನತೆಯ ವಿಶ್ವಾಸವನ್ನು ಉಳಿಸುವ ಕೆಲಸ ಆಗಿದೆ. ನಾನು ಯಾವುದೇ ಕೆಲಸ ಮಾಡಬೇಕಾದರೂ ತಾಲ್ಲೂಕಿನ ಜನತೆಗೆ ಲೈವ್ ಮುಖಾಂತರ ತಿಳಿಸುತ್ತೇನೆ. ಮಾಜಿ ಶಾಸಕರೊಬ್ಬರು ನನ್ನ ಲೈವ್ ಬಗ್ಗೆ ಹೀಯಾಳಿಸಿದ್ದರು. ನಾನು ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುವ ಲೈವ್ ಮುಖಾಂತರ ಮಾಡುತ್ತಿದ್ದೇನೆ. ಮಾಲೂರು ಕ್ಷೇತ್ರದ ಜನತೆಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಕೊಡುವುದು ನನ್ನ ಜವಾಬ್ದಾರಿ. ಅದನ್ನು ನಾನು ಮಾಡುತ್ತಿದ್ದೇನೆ ಎಂದರು.
ಕಾಮಗಾರಿ ಪ್ರಾರಂಭಗೊAಡಲ್ಲಿ ಮತ್ತು ಪ್ರಗತಿಯ ಬಗ್ಗೆ ಹಾಗೂ ಪೂರ್ಣಗೊಂಡಲ್ಲಿ ಜನತೆಗೆ ತಿಳಿಸುವ ಕೆಲಸ ನಾನು ಲೈವ್ ಮೂಲಕ ಮಾಡುತ್ತಿದ್ದೇನೆ. ಅದು ನನ್ನ ಜವಾಬ್ದಾರಿಯು ಆಗಿರುತ್ತದೆ. ನನ್ನ ಕ್ಷೇತ್ರ ಜನತೆಗೆ ಕೊಡದೆ ಹೊಸಕೋಟೆ ಜನತೆಗೆ ಕೊಡಬೇಕೆ ಎಂದು ಮಾಜಿ ಶಾಸಕ ಮಂಜುನಾಥಗೌಡರ ಹೆಸರು ಹೇಳದೆ ಟೀಕೆ ಮಾಡಿದರು.
ಮಾಲೂರು ಕ್ಷೇತ್ರದಲ್ಲಿ ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಜಿ ಶಾಸಕರಿಂದ ಆಗಿದೆಯೇ. ಮಾಲೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ಲೇಓವರ್, ಬಸ್‌ನಿಲ್ದಾಣ, ಆಸ್ಪತ್ರೆ, ಮಾಲೂರು ಕೆರೆಯ ಅಭಿವೃದ್ಧಿ ಸೇರಿದಂತೆ ೨.೫ ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ನಿಮ್ಮ ಕಾಲದ ಅಭಿವೃದ್ಧಿ ಕೆಲಸ ಹೂಂಡಾ ಸ್ಟೇಡಿಯಂ ಅದು ಸಿ.ಎಸ್.ಆರ್. ಅನುದಾನದಲ್ಲಿ ಆಗಿರುವುದು ನಿಮ್ಮ ಅನುದಾನದಲ್ಲಿ ಅಲ್ಲ ಎಂದು ಮಾಜಿ ಶಾಸಕರಿಗೆ ಟಾಂಗ್ ನೀಡಿದರು.
ಚಿತ್ರ ೧೦ ಕೆ.ಎಲ್.ಆರ್. ೦೪ : ಶಾಸಕ ನಂಜೇಗೌಡ ಭಾವಚಿತ್ರ